ಬೆಂಗಳೂರು: ರಾಜಧಾನಿಗೆ ಅನ್ನ ಅರಸಿ ಬಂದಿದ್ದ ಸಾವಿರಾರು ಮಂದಿ ಮಂಗಳವಾರವೂ ತಮ್ಮೂರಿನತ್ತ ತಂಡೋಪ ತಂಡವಾಗಿ ಗುಳೆ ಹೋಗಿದ್ದಾರೆ.
‘ಮಂಗಳವಾರ ರಾತ್ರಿಯಿಂದಲೇ ರಾಜ್ಯದಾದ್ಯಂತ ಕರ್ಫ್ಯೂ’ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಮಧ್ಯಾಹ್ನದಿಂದಲೇ ಜನರು ತಮ್ಮೂರಿನತ್ತ ಹೊರಟರು. ಮಂಗಳವಾರವೂ ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಾವಿರಾರು ಮಂದಿ ತಮ್ಮೂರಿನ ಬಸ್‌ಗಳು ಹಾಗೂ ರೈಲುಗಳನ್ನು ಹತ್ತಿದರು.
ನಗರದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳು ಹೆಚ್ಚಿದ್ದು, ಸಾವಿರಾರು ಮಂದಿ ಕೆಲಸಗಾರರಿದ್ದಾರೆ. ಅವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗಾರ್ಮೆಂಟ್ಸ್ ಕಾರ್ಖಾನೆಗಳನ್ನೂ ಸರ್ಕಾರ ಬಂದ್ ಮಾಡಿದ್ದರಿಂದ, ಕೆಲಸಗಾರರು ಗಂಟುಮೂಟೆ ಕಟ್ಟಿಕೊಂಡು ಕುಟುಂಬ ಸಮೇತರಾಗಿ ಬೆಂಗಳೂರು ತೊರೆದರು.
ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ, ಯಶವಂತಪುರ, ಮೈಸೂರು ರಸ್ತೆಯ ಸ್ಯಾಟಲೈಟ್ ನಿಲ್ದಾಣ ಸೇರಿದಂತೆ ಸುತ್ತಮುತ್ತ ಸ್ಥಳಗಳಲ್ಲಿ ಜನಸಂದಣಿ ಇತ್ತು. ಮಕ್ಕಳು, ವೃದ್ಧರ ಸಮೇತ ಗಂಟುಮೂಟೆ ಜೊತೆಯಲ್ಲಿ ಜನರು ಕುಳಿತುಕೊಂಡಿದ್ದು ಕಂಡುಬಂತು.
ಕರ್ಫ್ಯೂವನ್ನೇ ಬಂಡವಾಳ ಮಾಡಿಕೊಂಡಿದ್ದ ಖಾಸಗಿ ಬಸ್‌ಗಳ ಮಾಲೀಕರು, ಪ್ರಯಾಣ ದರವನ್ನು ಏಕಾಏಕಿ ಮೂರು ಪಟ್ಟು ಹೆಚ್ಚಿಸಿದ್ದರು. ಹೀಗಾಗಿ, ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಜನರ ಸಂಖ್ಯೆ ಹೆಚ್ಚಿದ್ದರಿಂದಾಗಿ ಮಂಗಳವಾರ 1,200ಕ್ಕೂ ಹೆಚ್ಚು ಬಸ್‌ಗಳನ್ನು ಸೇವೆಗೆ ಒದಗಿಸಲಾಗಿತ್ತು.
ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ ಸೇರಿದಂತೆ ಹಲವು ನಗರಗಳಿಗೆ ಬಸ್‌ಗಳು ಸಂಚರಿಸಿದವು. ಹಲವು ಬಸ್‌ಗಳು ಪ್ರಯಾಣಿಕರಿಂದ ಭರ್ತಿ ಆಗಿದ್ದವು. ಕೆಲ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.
ಹಲವರು ಖಾಸಗಿ ವಾಹನಗಳಲ್ಲಿ ಊರಿಗೆ ಹೋದರು. ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರದಿಂದ ದಟ್ಟಣೆ ಉಂಟಾಯಿತು.
ತುಮಕೂರು ರಸ್ತೆಯ ಪಾರ್ಲೆ ಕಾರ್ಖಾನೆ ಬಳಿಯ ಟೋಲ್‌ಗೇಟ್ ಹಾಗೂ ನೆಲಮಂಗಲ ಬಳಿಯ ಟೋಲ್‌ಗೇಟ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ದ್ವಿಚಕ್ರ ವಾಹನದಲ್ಲೂ ಬಹುಪಾಲು ಮಂದಿ ಕುಟುಂಬ ಸಮೇತರಾಗಿ ಹೋದರು. ಕೆಲವರು ಕಾರುಗಳಲ್ಲಿ ಗೃಹೋಪಯೋಗಿ ವಸ್ತುಗಳು ಹಾಗೂ ಪಾತ್ರೆಗಳನ್ನು ತುಂಬಿಕೊಂಡು ಹೋಗಿದ್ದು ಕಂಡುಬಂತು.
ಊರು ತೊರೆಯುವ ವೇಳೆ ಮೆಜೆಸ್ಟಿಕ್ ನಿಲ್ದಾಣದಲ್ಲಿ ತಮ್ಮ ಅಳಲು ತೋಡಿಕೊಂಡ ರಾಯಚೂರಿನ ಸುನಂದಾ, ‘ಅನ್ನ ಅರಸಿ ಕುಟುಂಬ ಸಮೇತ ನಗರಕ್ಕೆ ಬಂದಿದ್ದೆ. ಕರ್ಫ್ಯೂ ನಮ್ಮ ಅನ್ನ ಕಿತ್ತುಕೊಂಡಿದೆ. ವಿಧಿಯಿಲ್ಲದೇ ಊರಿಗೆ ಹೊರಟಿದ್ದೇವೆ’ ಎಂದರು.
ಬಾಗಲಕೋಟೆಯ ಪರಮೇಶ್ ಬಡಿಗೇರ್, ‘ನಗರದ ಸ್ಥಿತಿ ನೋಡಿದರೆ ಭಯವಾಗುತ್ತಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ತಂದೆ– ತಾಯಿ ಜೊತೆ ವಾಸವಿದ್ದೆ. ತಂದೆ–ತಾಯಿಗೆ ಹುಷಾರಿಲ್ಲದಿದ್ದರೆ ಆಸ್ಪತ್ರೆಗೆ ತೋರಿಸುವುದು ಕಷ್ಟವಾಗಲಿದೆ. ಹೀಗಾಗಿ ಊರಿಗೆ ಹೊರಟಿದ್ದೇವೆ’ ಎಂದರು.
ಯಾದಗಿರಿಯ ಪುಟ್ಟಮ್ಮ ಜಾಲಿಹಳ್ಳಿ, ‘ಕೊರೊನಾ ಸೋಂಕು ಹೆಚ್ಚಳವಾದರೂ ನಮ್ಮ ಸುರಕ್ಷತೆಯಲ್ಲಿ ನಾವಿದ್ದುಕೊಂಡು ಕೆಲಸಕ್ಕೆ ಹೋಗುತ್ತಿದ್ದೆವು. ಇದೀಗ ಎಲ್ಲವನ್ನೂ ಬಂದ್ ಮಾಡಿದ್ದಾರೆ. ಕೆಲಸವಿಲ್ಲವೆಂದು ಮಾಲೀಕರು ಹೇಳಿದ್ದಾರೆ. ಕರ್ಫ್ಯೂ ಮುಂದುವರಿಯುವ ಆತಂಕವೂ ಇದೆ. ಕೆಲಸವಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಕಷ್ಟ. ನಗರ ತೊರೆಯುವುದು ಅನಿವಾರ್ಯ’ ಎಂದರು.
ಮೆಜೆಸ್ಟಿಕ್ ನಿಲ್ದಾಣಕ್ಕೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಭೇಟಿ ನೀಡಿ ಪ್ರಯಾಣಿಕರನ್ನು ಮಾತನಾಡಿಸಿದರು.
‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ ಸರ್ಕಾರ’
ಗಾರ್ಮೆಂಟ್ಸ್ ನೌಕರ ಶಿವಮೊಗ್ಗದ ರಮೇಶ್, ‘ಕಳೆದ ಲಾಕ್‌ಡೌನ್‌ನಿಂದಾಗಿ ಸಂಬಳವಿಲ್ಲದೆ ಕಷ್ಟ ಅನುಭವಿಸಿದ್ದೆವು. ಈ ವರ್ಷ ಪುನಃ ಕೆಲಸಕ್ಕೆ ಕರೆಸಿದ್ದು ಖುಷಿ ತಂದಿತ್ತು. ಈಗ ದಿಢೀರ್ ಕಾರ್ಖಾನೆ ಬಂದ್ ಮಾಡಿಸಿದ್ದು, ಊರಿನತ್ತ ಹೊರಟಿದ್ದೇವೆ’ ಎಂದರು.
‘ಕೊರೊನಾ 2ನೇ ಅಲೆ ಬರುವ ಮಾಹಿತಿ ಸರ್ಕಾರಕ್ಕೆ ಇತ್ತು. ಅಷ್ಟಾದರೂ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದರು ಎಂಬಂತೆ ಸೋಂಕಿತರು ಹೆಚ್ಚಾಗಿ ಸಾವುಗಳು ಜಾಸ್ತಿಯಾದಾಗ ಬಿಗಿ ಕರ್ಫ್ಯೂ ಎನ್ನುತ್ತಿದೆ’ ಎಂದೂ ಅವರು ದೂರಿದರು.
ಹಳ್ಳಿಗಳಲ್ಲಿ ಸೋಂಕು ಹೆಚ್ಚಳ ಸಾಧ್ಯತೆ?
ಬಹುತೇಕ ಪ್ರಯಾಣಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಬಸ್‌ಗಳಲ್ಲಿ ಪ್ರಯಾಣಿಸಿದರು. ಶೇ 50ರಷ್ಟು ಆಸನದ ನಿಯಮವೂ ಪಾಲನೆಯಾಗಲಿಲ್ಲ. ಎಲ್ಲ ಸೀಟುಗಳನ್ನು ಭರ್ತಿ ಮಾಡಿಯೇ ಬಸ್‌ಗಳನ್ನು ಮುಂದಕ್ಕೆ ಬಿಡಲಾಯಿತು.
‘ಸಾವಿರಾರು ಸಂಖ್ಯೆ ಜನರು, ಬೆಂಗಳೂರು ತೊರೆದು ಹಳ್ಳಿ ಸೇರುತ್ತಿದ್ದಾರೆ. ಅವರಲ್ಲಿ ಯಾರಿಗಾದರೂ ಕೊರೊನಾ ಸೋಂಕು ಕಾಣಿಸಿಕೊಂಡರೆ ಮತ್ತಷ್ಟು ಅಪಾಯಗಳು ಎದುರಾಗುವ ಸಾಧ್ಯತೆ ಇದೆ. ಅಂಥ ಹಳ್ಳಿಗಳಲ್ಲಿ ಸೋಂಕು ಪ್ರಮಾಣ ಹೆಚ್ಚಾಗಬಹುದು’ ಎಂದು ಸಾರಿಗೆ ಸಿಬ್ಬಂದಿಯೇ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.