ADVERTISEMENT

ಲಂಚಕ್ಕೆ ಬೇಡಿಕೆ ಪ್ರಕರಣದಲ್ಲಿ ರವಿ ಚನ್ನಣ್ಣನವರ್ ಪಾತ್ರ ಇಲ್ಲ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:47 IST
Last Updated 18 ಮಾರ್ಚ್ 2022, 4:47 IST
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಷರ್ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡ ಪಡೆದ ಪ್ರಕರಣದಲ್ಲಿ ನಿಕಟಪೂರ್ವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ ಪಾತ್ರ ಕಂಡುಬಂದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.‌

ಬಿಜೆಪಿಯ ಎನ್. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು,‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತಿಬೆಲೆಯ ಆರ್. ಮಂಜುನಾಥ್‌ ಎಂಬವರು ನೀಡಿದ್ದ ದೂರು ಆಧರಿಸಿ ಐಜಿಪಿ ಅವರಿಂದ ತನಿಖೆ ನಡೆಸಲಾಗಿದೆ‘ ಎಂದರು.

‘ವಿಜಯಪುರ ಸರ್ಕಲ್ ಇನ್‌ಸ್ಪೆಕ್ಟರ್‌ ಟಿ.ಶ್ರೀನಿವಾಸ್, ಎಎಸ್‌ಐಗಳಾದ ಎನ್. ಶುಭಾ, ಕೆ.ಜಿ. ಅನಿತ ಎಂಬವರ ವಿರುದ್ಧ ದೂರು ಕೇಳಿಬಂದಿತ್ತು. ಈ ಅಧಿಕಾರಿಗಳ ದೂರವಾಣಿಕರೆ ಮಾಹಿತಿ ಪಡೆಯಲಾಗಿದೆ. ಕ್ರಷರ್ ಮಾಲೀಕರಿಗೆ ಸಹಾಯ ಮಾಡುವ ಮಾತುಕತೆ ನಡೆಸಿ, ನಂಬಿಸಿ ₹ 5 ಲಕ್ಷ ಪಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕಾರಣಕ್ಕೆ ಟಿ. ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ. ಎಎಸ್‌ಐಗಳ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗಿದೆ. ವಿಚಾರಣೆಯಲ್ಲಿ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಪಾತ್ರ ಕಂಡುಬಂದಿಲ್ಲ’ ಎಂದರು.

ADVERTISEMENT

ಆದರೆ, ಇದನ್ನು ಒಪ್ಪದ ರವಿಕುಮಾರ್‌, ‘ನನ್ನ ಬಳಿ ಪುರಾವೆಗಳಿವೆ’ ಎಂದರು.ಆಗ ಅದನ್ನು ತನಿಖೆ ಮಾಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.