ಬೆಂಗಳೂರು: ‘ತೇಜಸ್ವಿ ಸರಳವಾಗಿ ಬರೆಯುತ್ತಲೇ ಜೀವವಿಕಾಸದ ಕಥೆಗಳನ್ನು ಅದರೊಳಗೆ ಹುದುಗಿಸಿಟ್ಟಿದ್ದಾರೆ. ಅಂಥ ವಾಕ್ಯಗಳು ಎಲ್ಲ ಕಥೆ ಕಾದಂಬರಿಗಳಲ್ಲಿ ಬರುತ್ತವೆ’ ಎಂದು ವನ್ಯಜೀವಿ ಛಾಯಾಗ್ರಾಹಕ ಸೇನಾನಿ ತಿಳಿಸಿದರು.
‘ತೇಜಸ್ವಿ ಸಾಹಿತ್ಯ: ಸಾಂಸ್ಕೃತಿಕ ಹಬ್ಬ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸೋಮವಾರ ತೇಜಸ್ವಿ ಒಡನಾಡಿಗಳ ಸಂವಾದದಲ್ಲಿ ಅವರು ಮಾತನಾಡಿದರು.
‘ಮಾಸ್ತಿ ಮತ್ತು ಬೈರ ಕಥೆಯಲ್ಲಿ ಚರ್ಮ ಸುತ್ತಿಕೊಂಡ ಮನುಷ್ಯ ಹಳೇ ಶಿಲಾಯುಗದ ಮನುಷ್ಯನಂತೆ ಕಾಣುತ್ತಾನೆ. ಎಲ್ಲಿಂದ ಬಂದ ಎಂಬುದನ್ನು ತಿಳಿಯಲು ಪ್ರಶ್ನಿಸಿದಾಗ ಒಮ್ಮೆ ಆಫ್ರಿಕಾ ಖಂಡಕ್ಕೆ ಮತ್ತೊಮ್ಮೆ ಆಸ್ಟ್ರೆಲಿಯಾ ಖಂಡದ ಕಡೆಗೆ ಕೈ ತೋರಿಸಿದ ಎಂದು ಕಥೆಯಲ್ಲಿದೆ. ಪಶ್ಚಿಮಕ್ಕೆ, ದಕ್ಷಿಣಕ್ಕೆ ಕೈ ತೋರಿಸಿದ ಎಂದು ಬರೆಯುವುದನ್ನು ಬಿಟ್ಟು ಆಫ್ರಿಕಾ, ಆಸ್ಟೇಲಿಯಾ ಎಂದು ಯಾಕೆ ಬರೆದರು ಎಂಬುದನ್ನು ಯೋಚಿಸಿದರೆ ಮಾನವನ ಉಗಮ ಮತ್ತು ವಲಸೆಯ ಸಂಕೇತ ಇದು ಎಂಬುದು ಗೊತ್ತಾಗುತ್ತದೆ’ ಎಂದು ವಿಶ್ಲೇಷಿಸಿದರು.
ಇದೇ ರೀತಿ ಕರ್ವಾಲೊದಲ್ಲಿನ ಹಾರುವ ಓತಿ ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುತ್ತದೆ. ಈ ಮರದಿಂದ ಆ ಮರಕ್ಕೆ ಹಾರಲು ಎಷ್ಟು ಮಿಲಿಯನ್ ವರ್ಷ ಬೇಕಾಯಿತೋ ಎಂದು ತೇಜಸ್ವಿ ಬರೆಯುತ್ತಾರೆ. ಕೆಲವೇ ಸೆಕೆಂಡ್‌ಗಳಲ್ಲಿ ಹಾರಿರುವುದನ್ನು ಮಿಲಿಯನ್ ವರ್ಷ ಎಂದು ಯಾಕೆ ಬರೆದರು ಎಂದು ನೋಡಿದರೆ ಅದೂ ಜೀವ ವಿಕಾಸದ ರೂಪಕ ಎಂದು ಬಣ್ಣಿಸಿದರು.
ಒಡನಾಡಿಗಳಾದ ಪ್ರದೀಪ್ ಕೆಂಜಿಗೆ, ಪದ್ಮ ಶ್ರೀರಾಮ್, ಕೃಪಾಕರ, ಹಿ.ಚಿ. ಬೋರಲಿಂಗಯ್ಯ, ಜಯಂತ ಕಾಯ್ಕಿಣಿ, ವಿ.ವಿ. ಬೆಳವಾಡಿ, ಕಡಿದಾಳ್ ದಯಾನಂದ್, ಕಡಿದಾಳ್ ಪ್ರಕಾಶ್, ದೇವಂಗಿ ಮನುದೇವ್, ಆರ್. ರಾಘವೇಂದ್ರ, ಬಾಪು ದಿನೇಶ್ ಗೌಡ, ಬಿ.ಜಿ. ಗುಜ್ಜಾರಪ್ಪ, ಜಿ.ಕೆ. ವೆಂಕಟೇಶ್, ಮಲ್ಲಿಕ್ ಒಡನಾಟ ಹಂಚಿಕೊಂಡರು.
ನಗರದಲ್ಲಿ ಮೂನಿಸ್ವಾಮಿ ಆ್ಯಂಡ್ ಸನ್ಸ್, ಎಂ. ಚಂದ್ರಶೇಖರ್ ಪ್ರತಿಷ್ಠಾನ, ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮವಾರ ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು’ 14 ಸಂಪುಟಗಳನ್ನು ಪ್ರೊ. ರಾಜೇಂದ್ರ ಚೆನ್ನಿ, ಸಿ. ನಾರಾಯಣಸ್ವಾಮಿ, ಸಾಹಿತಿ ಹಂಪನಾಗರಾಜಯ್ಯ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ. ಎಲ್. ಶಂಕರ್, ಪ್ರೊ. ಚಿದಾನಂದ ಗೌಡ ಮತ್ತು ತಾರಿಣಿ ಚಿದಾನಂದ ಅವರು ಬಿಡುಗಡೆಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.