ADVERTISEMENT

ಲಾಕ್‌ಡೌನ್ | ಈ ಕಾರ್ಮಿಕರಿಗಿಲ್ಲ ಊರು ಸೇರುವ ಭಾಗ್ಯ

ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ಸಿಲುಕಿದ್ದಾರೆ 10 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು

ಪ್ರವೀಣ ಕುಮಾರ್ ಪಿ.ವಿ.
Published 5 ಮೇ 2020, 20:43 IST
Last Updated 5 ಮೇ 2020, 20:43 IST
ಬೆಂಗಳೂರಿನಿಂದ ತಮ್ಮ ಊರಿಗೆ ಹೊರಟ ವಲಸೆ ಕಾರ್ಮಿಕರು –-ಪ್ರಜಾವಾಣಿ ಚಿತ್ರ
ಬೆಂಗಳೂರಿನಿಂದ ತಮ್ಮ ಊರಿಗೆ ಹೊರಟ ವಲಸೆ ಕಾರ್ಮಿಕರು –-ಪ್ರಜಾವಾಣಿ ಚಿತ್ರ   

ಬೆಂಗಳೂರು: ತಮ್ಮ ಊರಿಗೆ ಮರಳಲು ವಲಸೆ ಕಾರ್ಮಿಕರಿಗೆ ಸರ್ಕಾರ ಅವಕಾಶ ಕಲ್ಪಿಸಿದ ಬಳಿಕ ನಾಲ್ಕು ದಿನಗಳಲ್ಲಿ ಹೆಚ್ಚೂ ಕಡಿಮೆ 75 ಸಾವಿರಕ್ಕೂ ಹೆಚ್ಚು ಕಾರ್ಮಿಕರು ತಮ್ಮ ತಮ್ಮ ಊರಿಗೆ ಮರಳಿದ್ದಾರೆ. ಆದರೆ, ನಗರದಲ್ಲಿ ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಉಳಿದುಕೊಂಡಿರುವ ಕಾರ್ಮಿಕರಿಗೆ ಈ ಭಾಗ್ಯವಿಲ್ಲ.

ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ 24 ವಾರ್ಡ್‌ಗಳಲ್ಲಿ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸಲಾಗಿದೆ. ಸೀಲ್‌ಡೌನ್‌ ಮಾಡಲಾದ ಈ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರು, ನಿರಾಶ್ರಿತರು ಸೇರಿದಂತೆ 10,767 ಮಂದಿಯನ್ನು ಬಿಬಿಎಂಪಿ ಗುರುತಿಸಿದ್ದು, ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡುತ್ತಿದೆ.

‘ಇವರಲ್ಲಿ ಬಹುತೇಕರು ವಲಸೆ ಕಾರ್ಮಿಕರು. ಸದ್ಯಕ್ಕೆ ಅವರು ಆ ಪ್ರದೇಶವನ್ನು ಬಿಟ್ಟು ಹೊರಗೆ ಬರುವಂತಿಲ್ಲ. ಇಲ್ಲಿರುವ ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಕಾರ್ಮಿಕ ಇಲಾಖೆ ನೀಡುತ್ತಿರುವ ಆಹಾರದ ಪೊಟ್ಟಣಗಳನ್ನು ಪಾಲಿಕೆ ವತಿಯಿಂದ ಪೂರೈಸಲಾಗುತ್ತಿದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಒಂದು ವಾರದಲ್ಲಿ ನಾಲ್ಕೈದು ವಾರ್ಡ್‌ಗಳಲ್ಲಿನ ಕಂಟೈನ್‌ಮೆಂಟ್‌ ಆದೇಶಗಳನ್ನು ಅವಧಿ ಪೂರ್ಣಗೊಂಡ ಕಾರಣಕ್ಕೆ ಹಿಂಪಡೆಯಲಾಗಿದೆ. ಆದರೂ ಅಲ್ಲಿರುವ ವಲಸೆ ಕಾರ್ಮಿಕರು ತಕ್ಷಣವೇ ಊರಿಗೆ ಹೋಗಲು ಅವಕಾಶ ಇಲ್ಲ.

‘ಕಂಟೈನ್‌ಮೆಂಟ್‌ ಆದೇಶ ಹಿಂಪಡೆದ ಬಳಿಕವೂ ಅಲ್ಲಿನ ವಲಸೆ ಕಾರ್ಮಿಕರ ಮೇಲೆ ಸ್ವಲ್ಪ ದಿನ ನಿಗಾ ಇಡಬೇಕಾಗುತ್ತದೆ. ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಿದ್ದೇವೆ. ಕೋವಿಡ್‌– 19 ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ ಮಾತ್ರ ಅವರನ್ನು ಊರಿಗೆ ಮರಳುವುದಕ್ಕೆ ಅವಕಾಶ ಕಲ್ಪಿಸಬಹುದು’ ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

‘ಲಾಕ್‌ಡೌನ್‌ ನಡುವೆಯೂ ನಿರ್ಮಾಣ ಕಾಮಗಾರಿಗಳನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಬಿಲ್ಡರ್‌ಗಳು ಹಾಗೂ ಗುತ್ತಿಗೆದಾರರರು ಕಟ್ಟಡ ಇನ್ನಿತರ ನಿರ್ಮಾಣ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಊರಿಗೆ ಮರಳುವ ಬದಲು ಇಲ್ಲೇ ಉಳಿಯುವಂತೆ ವಲಸೆ ಕಾರ್ಮಿಕರಿಗೆ ಹೇಳುತ್ತಿದ್ದೇವೆ’ ಎಂದರು.

ಹೊಂಗಸಂದ್ರ ವಾರ್ಡ್‌ನಲ್ಲಿ ನೆಲೆಸಿದ್ದ ಬಿಹಾರದ ಕಾರ್ಮಿಕನಲ್ಲಿ ಕೋವಿಡ್‌–19 ಸೋಂಕು ಕಾಣಿಸಿಕೊಂಡ ಬಳಿಕ ಆತನ ಸಂಪರ್ಕಕ್ಕೆ ಬಂದಿದ್ದ ಇತರ ಕಾರ್ಮಿಕರ ಪ್ರತ್ಯೇಕ ವಾಸಕ್ಕೆ ಬಿಬಿಎಂಪಿ ವ್ಯವಸ್ಥೆ ಮಾಡಿತ್ತು. ಈ ವಾರ್ಡ್‌ನ ಇತರ ಕೆಲವು ವಲಸೆ ಕಾರ್ಮಿಕರ ಗಂಟಲ ದ್ರವದ ಮಾದರಿಗಳನ್ನೂ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಇತರ ವಾರ್ಡ್‌ಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರ ಆರೋಗ್ಯದ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಿತ್ತು.

**

ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿರುವ ವಲಸೆ ಕಾರ್ಮಿಕರು, ನಿರ್ಬಂಧ ಮುಗಿವವರೆಗೂ ಅಲ್ಲೇ ಉಳಿಯಬೇಕಾಗುತ್ತದೆ. ಆರೋಗ್ಯ ತಪಾಸಣೆಗೆ ಒಳಪಡಿಸಿದ ಬಳಿಕವಷ್ಟೇ ಅವರನ್ನು ಊರಿಗೆ ಕಳುಹಿಸಲು ಕ್ರಮ ಕೈಗೊಳ್ಳುತ್ತೇವೆ
ಎನ್‌.ಮಂಜುನಾಥ ಪ್ರಸಾದ್‌,ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುವ ಹೊಣೆ ಹೊತ್ತ ಐಎಎಸ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.