ಬೆಂಗಳೂರು: ‘ಗೋವು ಅಂದರೆ ಹಿಂದೂ. ಗೋವು ಅಂದರೆ ಭಾರತ. ನಾವು ಗೋವುಗಳನ್ನು ಆರಾಧಿಸುವ ಕಾರಣಕ್ಕಾಗಿಯೇ ಅವರು ಕಡಿಯುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದರು.
ಕೆ.ಎನ್. ಶೈಲೇಶ್ ಹೊಳ್ಳ ರಚಿಸಿರುವ ಕಾಮಧೇನು ಸರಣಿಯ ಐದು ಪುಸ್ತಕಗಳನ್ನು ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಾಂಸಕ್ಕಾಗಿ ಇನ್ನು ಹಲವು ಪ್ರಾಣಿಗಳಿವೆ. ರುಚಿ ಹೆಚ್ಚು, ದರ ಕಡಿಮೆ ಎಂಬುದೆಲ್ಲ ನೈಜ ಕಾರಣವಲ್ಲ. ಇದಕ್ಕಿಂತ ಕಡಿಮೆ ದರದಲ್ಲಿ ಬೇರೆ ಮಾಂಸ ಸಿಗುತ್ತದೆ ಎಂದು ಹೇಳಿದರು.
‘ಗೋಸಂರಕ್ಷಣೆ ಹೆಸರಲ್ಲಿ ಇನ್ನೆಷ್ಟು ವರ್ಷ ಕೇಸ್ ಹಾಕಿಸಿಕೊಳ್ಳುವುದು. ಗೋಸೇವೆ, ಗೋಸಂರಕ್ಷಣೆಯಿಂದ ಗೋಸಂವರ್ಧನೆ ಕಡೆಗೆ ನಾವು ಬರಬೇಕು. ಇಂದು ಬಕ್ರೀದ್ ಆಚರಿಸಿಕೊಂಡವರನ್ನೂ ಗೋಸೇವೆಗೆ ಹಚ್ಚಬೇಕಾಗಿದೆ. ಆಗ ಗೋರಕ್ಷಣೆಗಿಂತ ಗೋಸಂವರ್ಧನೆಯೇ ಮುಖ್ಯ ವಿಷಯ ಆಗಲು ಸಾಧ್ಯ’ ಎಂದು ಪ್ರತಿಪಾದಿಸಿದರು.
ಗೋವು ಸಾಕಣೆ ಆರ್ಥಿಕ ಸ್ಥಿರತೆಯನ್ನು ಎಲ್ಲಿಯವರೆಗೆ ನೀಡುವುದಿಲ್ಲವೋ ಅಲ್ಲಿಯವರೆಗೆ ರೈತರು ಗೋವುಗಳ ಮಾರಾಟವನ್ನು ನಿಲ್ಲಿಸುವುದಿಲ್ಲ. ಗೋಶಾಲೆಗಳೆಲ್ಲ ಕೇವಲ ಸಂಕೇತಗಳು. ಗೋಶಾಲೆಗಳಿಂದ ಪೂರ್ಣಪ್ರಮಾಣದಲ್ಲಿ ಗೋಸಂರಕ್ಷಣೆ ಸಾಧ್ಯವಿಲ್ಲ. ಗೋಶಾಲೆ ಎಂಬುದು ವೃದ್ಧಾಶ್ರಮ ಇದ್ದಂತೆ. ಮನೆಯಲ್ಲಿ ಯಾರು ಗೋಸೇವೆ ಮಾಡುತ್ತಾರೋ ಅವರು ಹಿಂಸಾಪ್ರವೃತ್ತಿಯವರಾಗಲು ಸಾಧ್ಯವಿಲ್ಲ ಎಂದರು.
ಪಾರಂಪರಿಕ ವೈದ್ಯ ಹನುಮಂತ ಮಳಲಿ ಮಾತನಾಡಿ, ‘ನಮ್ಮಲ್ಲಿ ಕಸಾಯಿಖಾನೆಗೆ ಸುಲಭದಲ್ಲಿ ಅನುಮತಿ ಸಿಗುತ್ತದೆ. ಗೋಶಾಲೆಗಳಿಗೆ ಅನುಮತಿ ಪಡೆಯುವುದು ಕಷ್ಟ. ಗೋವು ಕಡಿಯುವವರು ಮತ್ತು ಅವರಿಗೆ ಗೋವು ಕೊಡುವವರು ಸರ್ವನಾಶವಾಗುವವರೆಗೆ ಗೋಹತ್ಯೆ ಪಾಪ ಹೋಗಲ್ಲ’ ಎಂದು ಹೇಳಿದರು.
ಲೇಖಕಿ ಎಸ್.ಆರ್. ಲೀಲಾ, ಚಿಕ್ಕಮಗಳೂರಿನ ‘ಗೋಲೋಕ’ ಗೋಶಾಲೆಯ ಅಧ್ಯಕ್ಷ ಎಸ್.ಎನ್. ರಾಮಸ್ವಾಮಿ, ಲೇಖಕ ಕೆ.ಎನ್. ಶೈಲೇಶ್ ಹೊಳ್ಳ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.