ಬೆಂಗಳೂರು: ಮನೆಗಳ ಬೀಗ ಒಡೆದು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಆರೋಪಿ ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ್ದ ಇಬ್ಬರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೇಗೂರು ನಿವಾಸಿ ಶಿವು ಅಲಿಯಾಸ್ ಶಿವರಪ್ಪನ್, ಈತನ ಸ್ನೇಹಿತರಾದ ಅನಿಲ್ ಅಲಿಯಾಸ್ ಜಗ್ಗ ಮತ್ತು ವಿವೇಕ ಬಂಧಿತ ಆರೋಪಿಗಳು.
ಆರೋಪಿಗಳಿಂದ ₹24 ಲಕ್ಷ ಮೌಲ್ಯದ 260 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಿವು ಕಳ್ಳತನ ಪ್ರಕರಣದ ಪ್ರಮುಖ ಆರೋಪಿ. ಕೌಟುಂಬಿಕ ಕಾರಣಕ್ಕೆ ಶಿವು ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚನೆ ಮಾಡಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ತಮ್ಮ ಬಡಾವಣೆಯ ಕೆಲವು ವಿದ್ಯಾರ್ಥಿಗಳು ಶಾಲಾ– ಕಾಲೇಜು ಶುಲ್ಕ ಕಟ್ಟಲು ಪರದಾಡುತ್ತಿರುವ ವಿಷಯವು ಶಿವುಗೆ ಗೊತ್ತಾಗಿತ್ತು. ಅವರ ಶಾಲಾ ಶುಲ್ಕ ಪಾವತಿಗಾಗಿ ಕಳ್ಳತನ ಮಾಡಲು ಇಳಿದಿದ್ದ ಎಂದು ಮೂಲಗಳು ತಿಳಿಸಿವೆ.
‘ಬ್ಯಾಡರಹಳ್ಳಿ ಸೇರಿ ಹಲವು ಕಡೆ ಮನೆಗಳಿಗೆ ನುಗ್ಗಿ ಶಿವು ಕಳ್ಳತನ ಮಾಡಿದ್ದ. ಕದ್ದ ಚಿನ್ನಾಭರಣವನ್ನು ಸ್ನೇಹಿತರಾದ ಅನಿಲ್ ಹಾಗೂ ವಿವೇಕ್ ಸಹಾಯದಿಂದ ಮಾರಾಟ ಮಾಡಿದ್ದ. ಕಳ್ಳತನದಿಂದ ಸಿಕ್ಕಿದ ಹಣದಲ್ಲಿ 20 ಮಕ್ಕಳ ಶಾಲಾ ಶುಲ್ಕ ಪಾವತಿ ಮಾಡಿದ್ದೇನೆ ಎಂಬುದಾಗಿ ಆರೋಪಿ ಶಿವು ಹೇಳಿಕೆ ನೀಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
‘ಕಳವು ಮಾಡಿದ್ದ ಚಿನ್ನವನ್ನು ₹22 ಲಕ್ಷಕ್ಕೆ ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದೆ. ವಿವೇಕ ಹಾಗೂ ಅನಿಲ್‌ಗೆ ತಲಾ ₹ 4ಲಕ್ಷ ನೀಡಿ ಆಟೊ ಕೊಡಿಸಿದ್ದೆ. ಉಳಿದ ಹಣದಲ್ಲಿ ಶಾಲಾ ಮಕ್ಕಳ ಶುಲ್ಕ ಪಾವತಿಸಿದ್ದೆ ಎಂಬುದಾಗಿ ಶಿವು ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಆರೋಪಿಯ ಹೇಳಿಕೆಯಲ್ಲಿ ಸತ್ಯಾಂಶ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.