ADVERTISEMENT

ಗಾಳಿಪಟ ದಾರದಿಂದ ಉರುಳಿಬಿದ್ದ ಬೈಕ್

ಫೇಸ್‌ಬುಕ್‌ನಲ್ಲಿ ಅಳಲು ತೋಡಿಕೊಂಡ ಮಹಿಳೆ | ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 2:01 IST
Last Updated 10 ಫೆಬ್ರುವರಿ 2020, 2:01 IST
ಸುರ್ಜಿತ್
ಸುರ್ಜಿತ್   

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಅಕ್ಷಯನಗರ ಸಮೀಪದ ಸ್ಟಾರ್‌ ಬಜಾರ್‌ ಬಳಿ ಗಾಳಿಪಟದ ದಾರ ಹೆಲ್ಮೆಟ್‌ಗೆ ಸುತ್ತಿಕೊಂಡಿದ್ದರಿಂದಾಗಿ ದ್ವಿಚಕ್ರ ವಾಹನ ಉರುಳಿಬಿದ್ದು ಸವಾರ ಗಾಯಗೊಂಡಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿ ಸುರ್ಜಿತ್ ಬ್ಯಾನರ್ಜಿ ಗಾಯಗೊಂಡವರು. ಫೆ.7ರಂದು ರಾತ್ರಿ 9.30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಘಟನೆ ಬಗ್ಗೆ ಫೇಸ್‌ಬುಕ್‌ನಲ್ಲಿ ಅಳಲು ತೋಡಿಕೊಂಡಿರುವ ಸುರ್ಜಿತ್ ಅವರ ಪತ್ನಿ ಸ್ವಾಗತಾ, ‘ಹೆಲ್ಮೆಟ್‌ಗೆ ಸುತ್ತಿಕೊಂಡಿದ್ದ ಗಾಳಿಪಟದ ದಾರ ಕುತ್ತಿಗೆಗೆ ಸುತ್ತಿಕೊಂಡಿದ್ದರೆ ಪತಿಯ ಜೀವವೇ ಹೋಗುತ್ತಿತ್ತು. ಈ ಘಟಗೆ ಯಾರು ಹೊಣೆ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಗಾಳಿಪಟದ ದಾರ ಹರಡಿಕೊಂಡಿತ್ತು (ಅದರ ಉದ್ದೇಶವೇನು ಹಾಗೂ ಅದಕ್ಕೆ ಕಾರಣ ಯಾರು ಎಂಬುದು ನನಗೆ ಗೊತ್ತಿಲ್ಲ). ಎಂದಿನಂತೆ ಪತಿ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸು ಬರುತ್ತಿದ್ದರು. ರಸ್ತೆಯಲ್ಲಿ ದಾರ ಇರುವುದು ಅವರ ಗಮನಕ್ಕೆ ಬಂದಿರಲಿಲ್ಲ. ಚಲಿಸುತ್ತಿದ್ದಾಗಲೇ ಪತಿಯ ಹೆಲ್ಮೆಟ್‌ಗೆ ದಾರ ಸುತ್ತಿಕೊಂಡಿತ್ತು. ಕಣ್ಣಿನ ಸಮೀಪದಲ್ಲೇ ದಾರವಿತ್ತು. ಸ್ವಲ್ಪದರಲ್ಲೇ ದಾರ ಕಣ್ಣನ್ನೇ ಕೊರೆಯುವ ಸ್ಥಿತಿಯಲ್ಲಿತ್ತು. ಅಷ್ಟರಲ್ಲೇ ನಿಯಂತ್ರಣ ತಪ್ಪಿ ಬೈಕ್ ರಸ್ತೆಯಲ್ಲೇ ಉರುಳಿಬಿದ್ದಿತ್ತು’ ಎಂದು ಸ್ವಾಗತಾ ಹೇಳಿಕೊಂಡಿದ್ದಾರೆ.

‘ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದೃಷ್ಟವಶಾತ್ ಹೆಚ್ಚಿನ ಗಾಯವಾಗಿಲ್ಲ. ಪತಿಗಾದ ತೊಂದರೆ ಯಾರಿಗಾದರೂ ಆಗಿ ಜೀವ ಹೋದರೆ ಯಾರು ಹೊಣೆ? ದಯವಿಟ್ಟು ಸ್ಥಳೀಯ ನಿವಾಸಿಗಳಿಗೆ ಸುರಕ್ಷಿತ ನಗರ ನಿರ್ಮಿಸಿ. ಘಟನೆ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಸ್ವಾಗತಾ ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.