ADVERTISEMENT

ಸಿದ್ದರಾಮಯ್ಯಗೆ ಬೆದರಿಕೆ: 10ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 20:30 IST
Last Updated 3 ಮಾರ್ಚ್ 2023, 20:30 IST
   

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ನೀಡಿರುವ ಹೇಳಿಕೆಯನ್ನು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಖಂಡಿಸಿದೆ.

‘ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನೂ ಹೊಡೆದುಹಾಕಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಅಶ್ವತ್ಥನಾರಾಯಣ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೂಡಲೇ ಸಚಿವ
ರನ್ನು ಬಂಧಿಸಬೇಕು. ನಿರ್ಲಕ್ಷ್ಯ ವಹಿಸಿದ ಮಂಡ್ಯ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್‌ ಮಾತನಾಡಿ, ‘ಪದೇ ಪದೇ ಅಸಾಂವಿಧಾನಿಕ ಮಾತುಗಳ ಮೂಲಕ ಸಿದ್ದರಾಮಯ್ಯ ಅವರನ್ನು ಅವಮಾನಿಸುತ್ತಿರುವ ಶಾಸಕ ಸಿ.ಟಿ. ರವಿ, ಕೆ.ಎಸ್‌ ಈಶ್ವರಪ್ಪ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಿದ್ದರಾಮಯ್ಯ ಅವರಿಗೆ ರಕ್ಷಣೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಒಕ್ಕೂಟದ ಸಂಚಾಲನಾ ಸಮಿತಿ ಸದಸ್ಯೆ ಬಿ.ಟಿ. ಲಲಿತಾನಾಯಕ್ ಮಾತನಾಡಿ, ‘ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಮಂತ್ರಿಯಾಗುವುದಕ್ಕೆಲಾಯಕ್ಕಿಲ್ಲ. ಹಣ ಬಲದಿಂದ ಅಧಿಕಾರಕ್ಕೆ ಬಂದಿರುವ ರಾಜ್ಯ ಸರ್ಕಾರ ನೈತಿಕವಾಗಿ ದಿವಾಳಿಯಾಗಿದೆ’ ಎಂದರು.

‘8 ದಿನಗಳೊಳಗೆ ಸಚಿವಅಶ್ವತ್ಥನಾರಾಯಣ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ, ಮಾರ್ಚ್‌ 10ರಂದು ನಗರದ ಸ್ವಾತಂತ್ರ್ಯ ಉದ್ಯಾ
ನದಲ್ಲಿ ಬೃಹತ್‌ ಪ್ರತಿಭಟನಾ ಸಮಾವೇಶ ಹಮ್ಮಕೊಳ್ಳಲಾಗುವುದು’ ಎಂದು ಒಕ್ಕೂಟದ ಸಂಚಲನಾ ಸಮಿತಿ ಸದಸ್ಯ ಅನಂತನಾಯ್ಕ ತಿಳಿಸಿದ್ದಾರೆ.

ಒಕ್ಕೂಟದ ಸಂಚಾಲಕ ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಸದಸ್ಯರಾದ ಎನ್‌.ವಿ. ನರಸಿಂಹಯ್ಯ, ಸುರೇಶ್ ಎಂ. ಲಾತೋರ್, ಎನ್‌. ಅನಂತನಾಯ್ಕ, ಜಿ.ಡಿ. ಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.