ADVERTISEMENT

ವಂಚಕರ ಬೆದರಿಕೆ ಕರೆ: MBA ವಿದ್ಯಾರ್ಥಿ ಆತ್ಮಹತ್ಯೆ

ಮರಣಪತ್ರದಲ್ಲಿ ಮೂರು ಮೊಬೈಲ್ ನಂಬರ್ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 1:14 IST
Last Updated 12 ಡಿಸೆಂಬರ್ 2025, 1:14 IST
ಜಗನ್ ಮೋಹನ್
ಜಗನ್ ಮೋಹನ್   

ಬೆಂಗಳೂರು: ನಗರದ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ವಂಚಕರ ಬೆದರಿಕೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಸರಘಟ್ಟ ರಸ್ತೆಯ ಶಾಂತಿನಗರದಲ್ಲಿ ನಡೆದಿದೆ.

ಕೇರಳದ ಜಗನ್ ಮೋಹನ್ (25) ಮೃತ ವಿದ್ಯಾರ್ಥಿ. ಅವರ ಸಹೋದರ ಕಿರಣ್ ಕುಮಾರ್ ನೀಡಿದ ದೂರು ಆಧರಿಸಿ ಸೋಲದೇವನಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ ವಿದ್ಯಾರ್ಥಿ, ಡಿಸೆಂಬರ್ 9ರಂದು ಬೆಳಿಗ್ಗೆ ಕಾಲೇಜಿಗೆ ತೆರಳಿ, ವಾಪಸ್ ಬಂದು ಸಂಜೆ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ADVERTISEMENT

‘ಮರಣಪತ್ರದಲ್ಲಿ ಮೂರು ಮೊಬೈಲ್‌ ಸಂಖ್ಯೆಗಳನ್ನು ಉಲ್ಲೇಖಿಸಲಾಗಿದ್ದು, ಪರಿಶೀಲನೆ ನಡೆಸಿದಾಗ ನಕಲಿ ವಿಡಿಯೊ ಕಾಲ್‌ನಲ್ಲಿ ₹25 ಸಾವಿರ ಹಣ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ವಿದ್ಯಾರ್ಥಿಯಿಂದ ಹಣ ಪಡೆದುಕೊಂಡು, ಬಳಿಕ ಹೆಚ್ಚಿನ ಹಣಕ್ಕೆ ಹಿಂಸೆ ನೀಡಿ, ಬೆದರಿಕೆ ಹಾಕಿದ್ದಾರೆ. ಹಣ ನೀಡದಿದ್ದರೆ ವಿದ್ಯಾರ್ಥಿಯ ವಿಡಿಯೊ, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿರುವ ಸಾಧ್ಯತೆಯೂ ಇದೆ’ ಎಂದು ಪೊಲೀಸರು ಶಂಕಿಸಿದ್ದಾರೆ‌.

‘ಮೊಬೈಲ್ ಸಂಖ್ಯೆಗಳ ಬಗ್ಗೆ ತನಿಖೆ ಆರಂಭಿಸಿದ್ದು, ಮೇಲ್ನೋಟಕ್ಕೆ ಇದು ಸೈಬರ್ ವಂಚಕರ ಕೃತ್ಯವಿರಬಹುದು’ ಎಂದು ತಿಳಿಸಿದರು.