ADVERTISEMENT

ಪ್ರೇಯಸಿಗಾಗಿ ದುಬಾರಿ ಬೆಲೆಯ ಮೊಬೈಲ್‌ ಕಳ್ಳತನ: ಮೂವರು ಆರೋಪಿಗಳ ಬಂಧನ

ಮೂವರು ಆರೋಪಿಗಳ ಬಂಧನ, ವರ್ತೂರು ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 1:28 IST
Last Updated 29 ಅಕ್ಟೋಬರ್ 2025, 1:28 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ವರ್ತೂರು ಮತ್ತು ಬೆಳ್ಳಂದೂರಿನ ಕ್ರೋಮಾ ಶೋ ರೂಮ್‌ಗೆ ನುಗ್ಗಿ ದುಬಾರಿ ಬೆಲೆಯ ಮೊಬೈಲ್‌ ಕಳ್ಳತನ ಮಾಡಿದ್ದ ಆರೋಪಿಗಳನ್ನು ವರ್ತೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಸಿಕ್ಕಿಂನ ದಿವಾಸ್‌ ಕಮಿ (22) ಮತ್ತು ಆತನ ಪ್ರೇಯಸಿ, ನೇಪಾಳದ ಅಸ್ಮಿತಾ(26), ದಿವಾಸ್‌ ಕಮಿ ಸ್ನೇಹಿತ ಅರೋಹಣ್ ತಾಪಾ (24) ಬಂಧಿತರು.

ಆರೋಪಿಗಳಿಂದ ₹40 ಲಕ್ಷ ಮೌಲ್ಯದ 39 ಮೊಬೈಲ್‌ಗಳು, ಡಿಜಿಟಲ್‌ ವಾಚ್‌ಗಳು, ಚಿನ್ನಾಭರಣ, ಕ್ಯಾಮೆರಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ದಿವಾಸ್‌ ಕಮಿ ಮತ್ತು ಆರೋಹಣ್ ತಾಪಾ ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಸ್ವಿಗ್ಗಿ ಡೆಲಿವರಿ ಹುಡುಗರಾಗಿ ಕೆಲಸ ಮಾಡುತ್ತಿದ್ದರು. ನೇಪಾಳದ ಅಸ್ಮಿತಾ ಅವರಿಗೆ ಮದುವೆಯಾಗಿದ್ದು, ಪತಿಯಿಂದ ದೂರವಾಗಿ ಒಂದು ವರ್ಷದಿಂದ ದಿವಾಸ್ ಕಮಿ ಜತೆಗೆ ಸಹ ಜೀವನ ನಡೆಸುತ್ತಿದ್ದರು. ಅಸ್ಮಿತಾ ಅವರು ಮನೆಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಫುಡ್ ಡೆಲಿವರಿ ಹುಡುಗರಾಗಿ ಕೆಲಸ ಮಾಡುತ್ತಿದ್ದ ದಿವಾಸ್‌ ಕಮಿ ಮತ್ತು ಆರೋಹಣ್ ತಾಪಾ ಕ್ರೋಮಾ ಮೊಬೈಲ್‌ ಅಂಗಡಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಬೆಳ್ಳಂದೂರು ಮತ್ತು ವರ್ತೂರಿನಲ್ಲಿರುವ ಕ್ರೋಮಾ ಶೋ ರೂಮ್‌ಗಳ ಬಗ್ಗೆ ಇತ್ತೀಚೆಗೆ ಮಾಹಿತಿ ಸಂಗ್ರಹಿಸಿದ್ದರು. ಅಕ್ಟೋಬರ್‌ ಮೊದಲ ವಾರದಲ್ಲಿ ಬೆಳ್ಳಂದೂರಿನ ಕ್ರೋಮಾ ಶೋ ರೂಮ್‌ ಮತ್ತು ವರ್ತೂರಿನ ಕ್ರೋಮಾ ಶೋ ರೂಮ್‌ನಲ್ಲಿ ಮೊಬೈಲ್ ಕಳವು ಮಾಡಿ, ತುರ್ತು ನಿರ್ಗಮನ ಬಾಗಿಲು ತೆರೆದು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ಕಳವು ಮಾಡುತ್ತಿದ್ದ ದುಬಾರಿ ಬೆಲೆಯ ಮೊಬೈಲ್‌ಗಳನ್ನು ಅಸ್ಮಿತಾ ನೀಡುತ್ತಿದ್ದರು ಅಸ್ಮಿತಾ ಅವರು ತಮಗೆ ಪರಿಚಯವಿದ್ದವರಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಮೊಬೈಲ್ ಮಾರಾಟ ಮಾಡಿದ್ದ ಹಣದಲ್ಲಿ ಎಂಟು ಗ್ರಾಂ ಚಿನ್ನ ಖರೀದಿಸಿದ್ದ ದಿವಾಸ್‌ ಕಮಿ, ಪ್ರೇಯಸಿಗೆ ನೀಡಿದ್ದರು. ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ದಿವಾಸ್‌ ಕಮಿ ತನ್ನ ಪ್ರೇಯಸಿ ಅಸ್ಮಿತಾಗಾಗಿಯೇ ಮೊಬೈಲ್‌ ಕಳ್ಳತನ ಮಾಡಿದ್ದೆ ಎಂಬುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.