ADVERTISEMENT

ಬೆಂಗಳೂರು: ಚಿನ್ನ, ವಜ್ರ ಕಳವು ಮಾಡಿದ್ದ ಮನೆಕೆಲಸದಾಕೆ

ಮೂವರು ಆರೋಪಿಗಳ ಬಂಧನ, ₹ 30 ಲಕ್ಷ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 16:14 IST
Last Updated 30 ಜುಲೈ 2024, 16:14 IST
ದಿವ್ಯಾ
ದಿವ್ಯಾ    

ಬೆಂಗಳೂರು: ಕೆಲಸ‌ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ವಜ್ರದ ಆಭರಣಗಳನ್ನು  ಕಳ್ಳತನ ಮಾಡಿದ್ದ ಮನೆ ಕೆಲಸದಾಕೆ ಸೇರಿದಂತೆ ಮೂವರನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮನೆ ಕೆಲಸದಾಕೆ ದಿವ್ಯಾ ಹಾಗೂ ಕೃತ್ಯಕ್ಕೆ ಸಹಕರಿಸಿದ ಮಂಜು ಹಾಗೂ ಜೋಮನ್ ಅವರನ್ನು ಬಂಧಿಸಿ, ₹ 30 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ದಿವ್ಯಶ್ರೀ ಟೆಕ್​ ಪಾರ್ಕ್​ನ ವಿಲ್ಲಾವೊಂದರಲ್ಲಿ ನೆಲೆಸಿದ್ದ ಉದ್ಯಮಿ ಮನೆಯಲ್ಲಿ ದಿವ್ಯಾ ಎರಡು ವರ್ಷಗಳಿಂದ‌ ಕೆಲಸ ಮಾಡುತ್ತಿದ್ದರು. ರಜೆ ಕಾರಣ ಮಾಲೀಕರ ಕುಟುಂಬ ಪ್ರವಾಸಕ್ಕೆ ತೆರಳಿತ್ತು. ವಾಪಸ್‌ ಮನೆಗೆ ಬಂದು ಪರಿಶೀಲಿಸಿದಾಗ ವಜ್ರ ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿದೆ‌.

ADVERTISEMENT

ಮನೆಯಲ್ಲಿ ಕೆಲಸ ಮಾಡುತ್ತಿದ್ದ ಏಳು ಮಂದಿ ವಿರುದ್ಧ ಅನುಮಾನ ವ್ಯಕ್ತಪಡಿಸಿ, ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ ದಿವ್ಯಾ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಲೀಕರ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ದಿವ್ಯಾ, ಆರು ತಿಂಗಳಿಂದ ಹಂತ ಹಂತವಾಗಿ ಚಿನ್ನಾಭರಣ ಕಳವು ಮಾಡುತ್ತಿದ್ದನ್ನು ವಿಚಾರಣೆ ವೇಳೆ ತಿಳಿಸಿದ್ದಾರೆ. ವಿಚಾರಣೆ ವೇಳೆ ಕೈ ಕುಯ್ದುಕೊಳ್ಳಲು ಸಹ ಯತ್ನಿಸಿದ್ದಾರೆ. ಕದ್ದ ಆಭರಣವನ್ನು ತನ್ನ ದೊಡ್ಡಮ್ಮ ಮಂಜು ಅವರಿಗೆ ನೀಡಿದ್ದರು. ಅವರು ತನ್ನ ಪರಿಚಯದ ವ್ಯಕ್ತಿ ಜೋಮನ್ ಎಂಬುವವರಿಗೆ ಮಾರಾಟ ಮಾಡಲು ನೀಡಿದ್ದರು. ಆತ ಗಿರವಿ ಅಂಗಡಿಗೆ ಮಾರಾಟ ಮಾಡಿದ್ದು, ₹ 30 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ‌ ಎಂದು ಪೊಲೀಸರು ಹೇಳಿದ್ದಾರೆ.

ಮಂಜು
ಜೋಮನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.