ADVERTISEMENT

‘ಪ್ರಜಾವಾಣಿ’ ಫೋನ್‌ ಇನ್‌ | ಯುವನಿಧಿಗೆ ಮೂರೇ ಮಾನದಂಡ - ಸಚಿವ ಶರಣ ಪ್ರಕಾಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 15:39 IST
Last Updated 8 ಜನವರಿ 2024, 15:39 IST
ಶರಣ ಪ್ರಕಾಶ ಪಾಟೀಲ
ಶರಣ ಪ್ರಕಾಶ ಪಾಟೀಲ   

ಬೆಂಗಳೂರು: 2022–23ರಲ್ಲಿ ಪದವಿ, ಡಿಪ್ಲೊಮಾ ಉತ್ತೀರ್ಣರಾಗಿರುವ ಜೊತೆಗೆ, ಮೂರೇ ಮೂರು ಮಾನದಂಡಗಳಿಗೆ ಒಳಪಡುವವರು ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ‘ಯುವನಿಧಿ’ ಯೋಜನೆಗೆ ಅರ್ಹರಾಗುತ್ತಾರೆ.

ಅರ್ಜಿ ಸಲ್ಲಿಸುವವರು ಯಾವುದೇ ಸರ್ಕಾರಿ ಅಥವಾ ಖಾಸಗಿ ಉದ್ಯೋಗಿಯಾಗಿರಬಾರದು, ಸ್ವಯಂ ಉದ್ಯೋಗ ಇರಬಾರದು, ಉನ್ನತ ವಿದ್ಯಾಭ್ಯಾಸ ಮಾಡುತ್ತಿರಬಾರದು– ಇವೇ ಆ ಮೂರು ಮಾನದಂಡಗಳು. ಇವನ್ನು ಬಿಟ್ಟು ಎಪಿಎಲ್‌, ಬಿಪಿಎಲ್‌.. ಇಂಥ ಯಾವುದೇ ಮಾನದಂಡಗಳಿರುವುದಿಲ್ಲ.

ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ಫೋನ್‌–ಇನ್ ಕಾರ್ಯಕ್ರಮದಲ್ಲಿ ಕರೆ ಸ್ವೀಕರಿಸಿ ಮಾತನಾಡಿದ ಕೌಶಲಾಭಿವೃದ್ಧಿ, ಜೀವನೋಪಾಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಈ ವಿವರ ನೀಡಿದರು.

ADVERTISEMENT

ಕರ್ನಾಟಕದಲ್ಲಿ ವಾಸ ಇರುವವರು ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆಯಾ ವಿಶ್ವವಿದ್ಯಾಲಯದವರೇ ನ್ಯಾಷನಲ್‌ ಅಕಾಡೆಮಿ ಡೆಪಾಸಿಟರಿಯಲ್ಲಿ (ಎನ್‌ಎಡಿ) ಪ್ರಮಾಣ ಪತ್ರಗಳನ್ನು ಡೆಪಾಸಿಟ್‌ ಮಾಡಬೇಕು ಎಂದು ಮಾಹಿತಿ ನೀಡಿದರು.

ಉಳಿದವರಿಗೆ ಕೌಶಲ ತರಬೇತಿ

2022–23ಕ್ಕಿಂತ ಮೊದಲು ಉತ್ತೀರ್ಣರಾದವರು ಏನು ಮಾಡಬೇಕು ಎಂಬ ಬಗ್ಗೆ ಹಲವು ಪ್ರಶ್ನೆಗಳು ‘ಫೋನ್‌ ಇನ್’ನಲ್ಲಿ ಬಂದವು. ಅದಕ್ಕೆ ಸಚಿವರು ಉತ್ತರಿಸಿ, ‘ಅಂಥವರು ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ನಲ್ಲಿ(https://skillconnect.kaushalkar.com) ನೋಂದಣಿ ಮಾಡಿಕೊಳ್ಳಬೇಕು. ಅವರಿಗೆ ಬೇಕಾದ ತರಬೇತಿಯನ್ನು ಆಯ್ಕೆ ಮಾಡಿಕೊಳ್ಳಲು ಪೋರ್ಟಲ್‌ನಲ್ಲಿ ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹ 3,000, ಡಿಪ್ಲೊಮಾ ಹೊಂದಿದವರಿಗೆ ₹ 1,500ವನ್ನು 2 ವರ್ಷವರೆಗೆ ನೀಡುವುದು ಯುವನಿಧಿ ಯೋಜನೆ. ಇದರ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಬೇಕಾದ ಕ್ರಮ ವಹಿಸುವುದು ಕೂಡ ಸರ್ಕಾರದ ಗುರಿ. ಕೇವಲ ನಿರುದ್ಯೋಗ ಭತ್ಯೆ ನೀಡುವುದು, ತರಬೇತಿ ನೀಡುವುದರಿಂದ ಪ್ರಯೋಜನವಾಗುವುದಿಲ್ಲ. ತರಬೇತಿ ಜೊತೆಗೆ ಉದ್ಯೋಗ ನೀಡುವುದು ಮುಖ್ಯವಾಗಬೇಕು ಎಂದು ವಿಶ್ಲೇಷಿಸಿದರು.

ನಿರುದ್ಯೋಗಿಗಳ ವಿದ್ಯಾರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ಕೌಶಲ ತರಬೇತಿ ನೀಡಲಾಗುವುದು. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಉದ್ಯೋಗಮೇಳವನ್ನು ನಡೆಸಲಾಗುವುದು. ಅಲ್ಲಿ ಕಂಪನಿಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ ಮತ್ತು ಅವರಿಗೆ ಬೇಕಾದ ತರಬೇತಿಯನ್ನು ಆ ಕಂಪನಿಗಳೇ ನೀಡುತ್ತವೆ. ಸರ್ಕಾರವು ಕಂಪನಿ ಮತ್ತು ನಿರುದ್ಯೋಗಿಗಳ ನಡುವೆ ಸಂಪರ್ಕಕೊಂಡಿಯಾಗಿ ಕೆಲಸ ಮಾಡಲಿದೆ ಎಂದರು.

ಫಲಿತಾಂಶ ತಡವಾಗಿದ್ದರಿಂದ ಗೊಂದಲ: ಕೋವಿಡ್‌ ಕಾರಣದಿಂದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಎರಡು ವರ್ಷಗಳಲ್ಲಿ ಫಲಿತಾಂಶ ತಡವಾಗಿತ್ತು. 2023ರ ಜನವರಿಯಲ್ಲಿ ಫಲಿತಾಂಶ ಪ‍್ರಕಟವಾಗಿತ್ತು. ಆ ವರ್ಷದಲ್ಲಿ ಫಲಿತಾಂಶ ಪ್ರಕಟವಾದರೂ, ಅದು 2022–23ನೇ ಸಾಲಿಗೆ ಸೇರುವುದಿಲ್ಲ. ಹಾಗಾಗಿ ಇಂಥವರು ಸೇವಾಸಿಂಧು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಲು ಹೋದಾಗ ಪೋರ್ಟಲ್‌ ತೆರೆದುಕೊಳ್ಳುತ್ತಿಲ್ಲ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಆಯುಕ್ತೆ ರಾಗಪ್ರಿಯಾ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಸುಜಾತಾ ರಾಠೋಡ್ ಪಾಲ್ಗೊಂಡಿದ್ದರು.

ಅಂಕಿ ಅಂಶ

5.29 ಲಕ್ಷ 2022–23ರಲ್ಲಿ ಪದವಿ ಪೂರ್ಣಗೊಳಿಸಿದವರು. 4.12 ಲಕ್ಷ ವಿವಿಧ ವಿಶ್ವವಿದ್ಯಾಲಯಗಳು ಎನ್‌ಎಡಿಯಲ್ಲಿ ಪ್ರಮಾಣ ಪತ್ರಗಳನ್ನು ಡೆಪಾಸಿಟ್‌ ಮಾಡಿರುವ ಪ್ರಮಾಣ 50 ಸಾವಿರ ಯುವನಿಧಿಗೆ ಈಗಾಗಲೇ ನೋಂದಾಯಿಸಿಕೊಂಡವರು.

ಹಲವು ಸಮಸ್ಯೆಗಳು ರಿಮ್ಸ್‌ನಲ್ಲಿ

ಕಂಪ್ಯೂಟರ್ ಆಪರೇಟರ್‌ಗಳಿಗೆ ಐದು ತಿಂಗಳಿನಿಂದ ವೇತನ ಆಗದಿರುವ ಬಗ್ಗೆ ಶರಣು ಗಿರಿಜಾ ರಾಯಚೂರು ಸ್ಟಾಫ್‌ನರ್ಸ್‌ಗಳಿಗೆ ಕನಿಷ್ಠ ವೇತನ ಇಲ್ಲದಿರುವ ಬಗ್ಗೆ ಸುರನ್‌ ಕುಮಾರ್‌ ಅಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿರುವ ಹಾಸ್ಟೆಲ್‌ನಲ್ಲಿ ವಿದ್ಯುತ್ ಕೈಕೊಟ್ಟರೆ ಪರ್ಯಾಯ ವ್ಯವಸ್ಥೆ ಇಲ್ಲದಿರುವ ಬಗ್ಗೆ ಬಾಷಾ ಸಚಿವರ ಗಮನ ಸೆಳೆದರು. ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಬಸವರಾಜು ತಿಪಟೂರು ಮತ್ತು ಪಿಜಿ ವಿದ್ಯಾರ್ಥಿ ಪೃಥ್ವಿ ಯಾದಗಿರಿ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಬಗ್ಗೆ ಸುರಪುರದ ರಾಘವೇಂದ್ರ ಪ್ರಶ್ನಿಸಿದರು. ಐಟಿಐ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ ಸೇವಾ ಭದ್ರತೆ ಇಲ್ಲದಿರುವ ಬಗ್ಗೆ ಹಾಸನದ ಸಂತೋಷ್ ಅಳಲು ತೋಡಿಕೊಂಡರು.

ಗ್ರಾಮೀಣ ಸೇವೆ ಕಡ್ಡಾಯ ತೆಗೆದಿಲ್ಲ

ವೈದ್ಯಕೀಯ ಕೋರ್ಸ್‌ ಪೂರ್ಣಗೊಳಿಸಿದವರು ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು ಎಂಬ ನಿಯಮವನ್ನು ತೆಗೆದುಹಾಕಿಲ್ಲ. ಆದರೆ ಅಗತ್ಯ ಇರುವ ಹುದ್ದೆಗಳಿಗಿಂತ ವ್ಯಾಸಂಗ ಪೂರ್ಣಗೊಳಿಸಿದವರ ಸಂಖ್ಯೆ ಹೆಚ್ಚಿರುವುದರಿಂದ ತಾತ್ಕಾಲಿಕವಾಗಿ ಸಡಿಲಿಕೆ ನೀಡಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ವೈದ್ಯರ ಸಂಖ್ಯೆ ಕಡಿಮೆಯಾಗಿದೆ ಎಂಬುದು ಸರಿಯಲ್ಲ. ಅಗತ್ಯ ಇರುವಷ್ಟು ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಕೊಳ್ಳುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಶರಣ ಪ್ರಕಾಶ ಪಾಟೀಲ ಸ್ಪಷ್ಟಪಡಿಸಿದರು.

ಪ್ರಶ್ನೆಗಳ ಮಹಾಪೂರ

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪ್ರಶ್ನೆಗಳ ಮಹಾಪೂರವೇ ಹರಿದು ಬಂತು. ಅದರಲ್ಲಿ ಯುವನಿಧಿಗೆ ಸಂಬಂಧಿಸಿದಂತೆಯೇ ಶಹಪೂರ್‌ನ ಪೂಜಾ ರಮೇಶ್‌ ಕಲಬುರಗಿಯ ಆಕಾಶ್‌ ರಾಯಚೂರಿನ ಬಸವಲಿಂಗಪ್ಪ ವಿಜಯಪುರದ ನಿಖಿತಾ ಸಹಿತ ಹಲವು ಮಂದಿ ಪ್ರಶ್ನಿಸಿ ಗೊಂದಲ ಪರಿಹರಿಸಿಕೊಂಡರು. 

ಕೆಲವು ಕರೆಗಳ ವಿವರ

  • ಜೆಟಿಒ (ಜೂನಿಯರ್ ಟ್ರೈನಿಂಗ್ ಆಫೀಸರ್‌) ಪರೀಕ್ಷೆ ಬರೆದು ಆರು ವರ್ಗಗಳಾಗಿವೆ. ಸರ್ಕಾರದಿಂದ ಎನ್‌ಎಸಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇನ್ನೂ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಿಲ್ಲ. –ಸುರೇಶ್ ಬೆಳಗಾವಿ ಸಚಿವ: ಪ್ರಕರಣ ಕೋರ್ಟ್‌ನಲ್ಲಿದೆ. ಕೆಪಿಎಸ್‌ಸಿ ಪಟ್ಟಿಯನ್ನು ಅಂತಿಮಗೊಳಿಸಿದೆ. ಮುಂದಿನ ವಿಚಾರಣೆಯಲ್ಲಿ (ಜ.16) ಕೋರ್ಟ್‌ಗೆ ಪಟ್ಟಿಯನ್ನು ಸಲ್ಲಿಸಲಾಗುತ್ತಿದೆ. ಕೋರ್ಟ್ ಅನುಮತಿ ನೀಡಿದ ನಂತರ ಅಂತಿಮ ಜ್ಯೇಷ್ಠತಾ ಪಟ್ಟಿ ಬಿಡುಗಡೆ ಮಾಡುತ್ತೇವೆ.

  • ನಿಮ್ಹಾನ್ಸ್‌ನಲ್ಲಿ ಪಾರ್ಕಿಂಗ್ ಶುಲ್ಕ ದುಬಾರಿ ಇದೆ. ಇಲ್ಲಿಗೆ ಬಡವರು ಹೆಚ್ಚು ಹೋಗುತ್ತಾರೆ. ಹೊರ ರೋಗಿಗಳ ವಿಭಾಗದಲ್ಲಿ ಮೊದಲು ಬಂದವರಿಗೆ ಮೊದಲು ಚಿಕಿತ್ಸೆ ಸಿಗುತ್ತಿಲ್ಲ. –ಶಂಕರ್‌ನಾಯಕ್ ಬೆಂಗಳೂರು ಸಚಿವ: ನಿಮ್ಹಾನ್ಸ್ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಆದರೂ ನಾನು ನಿಮ್ಮ ದೂರನ್ನು ನಿಮ್ಹಾನ್ಸ್‌ ನಿರ್ದೇಶಕರಿಗೆ ಕಳುಹಿಸಿಕೊಡುವೆ. ಒಪಿಡಿಯಲ್ಲಿ ಮೊದಲು ಬಂದವರಿಗೆ ಮೊದಲ ಸೇವೆಯನ್ನು ಅನುಸರಿಸಲು ತಿಳಿಸುವೆ.

  • ಕಾರವಾರದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಬ್ಯಾಕ್‌ಲಾಗ್‌ನ 17 ಹುದ್ದೆಗಳನ್ನು ಬಿಟ್ಟು 37 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದಾರೆ. ರೋಸ್ಟರ್‌ ಪ್ರಕಾರ ಸರಿಯಾಗಿ ಹುದ್ದೆಗಳ ನೇಮಕಾತಿಯಾಗುತ್ತಿಲ್ಲ. – ದೀಪಕ್‌ ಕಾರವಾರ ಸಚಿವ: ವೈದ್ಯಕೀಯ ಇಲಾಖೆಯ ಎಲ್ಲ ನೇಮಕಾತಿಗಳೂ ಮೆರಿಟ್‌ ಮತ್ತು ರೋಸ್ಟರ್‌ ಪದ್ಧತಿಯ ಮೂಲಕವೇ ನಡೆಯಲಿವೆ. ಈ ಪ್ರಕರಣವನ್ನು ಪರಿಶೀಲಿಸುತ್ತೇನೆ. ಕಾನೂನು ಬಾಹಿರ ಎಂದು ಕಂಡರೆ ಖಂಡಿತಾ ಕ್ರಮ ಕೈಗೊಳ್ಳುತ್ತೇನೆ.

  • ಹೊಸ ಜಿಲ್ಲೆಯಾಗಿರುವ ವಿಜಯನಗರಕ್ಕೆ ವೈದ್ಯಕೀಯ ಕಾಲೇಜು ಬೇಕು. ಹೈದರಾಬಾದ್‌– ಕರ್ನಾಟಕದಲ್ಲಿ ತುಂಬಾ ನೇಮಕಾತಿಗಳು ಬಾಕಿ ಇವೆ. – ವಿನಾಯಕ ವಿಜಯನಗರ ಸಚಿವ: ಕಲ್ಯಾಣ ಕರ್ನಾಟಕದಲ್ಲಿ ಬಾಕಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು  ಸಚಿವರಾದ ಪ್ರಿಯಾಂಕ್‌ ಖರ್ಗೆ ಬೋಸರಾಜು ಅವರೊಂದಿಗೆ ಸಭೆ ನಡೆಸಿದ್ದೇನೆ. 7000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿದ್ದೇವೆ. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಮಾಡಬೇಕೆಂಬ ವಿಷಯ ಪರಿಶೀಲನೆಯಲ್ಲಿದೆ.

  • ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ವೈದ್ಯರು 12 ಗಂಟೆಯಿಂದ 4 ಗಂಟೆವರೆಗೆ ಲಭ್ಯವಿರುವುದಿಲ್ಲ. ಊಟಕ್ಕೆ ಹೋದವರು ಬರುವುದಿಲ್ಲ. ಹೊರ ರೋಗಿಗಳ ವಿಭಾಗದಲ್ಲೂ ವೈದ್ಯರು ಇರುವುದಿಲ್ಲ. ಪಿ.ಜಿ ವಿದ್ಯಾರ್ಥಿಗಳಷ್ಟೇ ಇರುತ್ತಾರೆ. – ನವೀನ್‌ ಮೈಸೂರು ಸಚಿವ: ಹೊರ ರೋಗಿಗಳ ಪರೀಕ್ಷಿಸುವ ಸಮಯದಲ್ಲಿ ಕಡ್ಡಾಯವಾಗಿ ವೈದ್ಯರು ಇರಬೇಕು. ಈ ಆಸ್ಪತ್ರೆಯ ವಿಷಯವನ್ನು ಪರಿಶೀಲಿಸುತ್ತೇನೆ. 

  • ಸೇಡಂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕೆಲವು ಪಿಎಚ್‌ಸಿಗಳಲ್ಲಿ ಒಬ್ಬರೇ ವೈದ್ಯರು ಎರಡು ಮೂರು ಕಡೆ ಕೆಲಸ ನಿರ್ವಹಿಸವಂತಾಗಿದೆ. – ವರದಪ್ಪ ಸೇಡಂ ಸಚಿವ: ತಾಲ್ಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇಲ್ಲ. ಪಿಎಚ್‌ಸಿಯಲ್ಲಿರುವ ಸಮಸ್ಯೆ ಬಗ್ಗೆ ಡಿಎಚ್‌ಒ ಅವರಿಗೆ ಗಮನ ಹರಿಸಲು ಸೂಚಿಸಿವೆ.

  • ಸರ್ಕಾರಿ ವೈದ್ಯಕೀಯ ಕಾಲೇಜು ನೇಮಕಾತಿಯಲ್ಲಿ ಮೀಸಲಾತಿ ಅನುಸರಿಸುವುದಿಲ್ಲ. ಬ್ಯಾಕ್‌ಲಾಗ್ ಹುದ್ದೆಗಳನ್ನು ಬಹಳ ಕಡಿಮೆ ತೋರಿಸುತ್ತಾರೆ. ಗ್ರೂಪ್‌ ಬಿ ಮತ್ತು ಸಿ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುತ್ತದೆ.  – ಶೀತಲ್ ಕಾಂಬ್ಳೆ ಬಾಗಲಕೋಟೆ ಸಚಿವ: ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುವಾಗ ಮೆರಿಟ್ ಮತ್ತು ರೋಸ್ಟರ್‌ ಪದ್ಧತಿಯನ್ನೇ ಅನುಸರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.