ADVERTISEMENT

ಬೆಂಗಳೂರಿನಲ್ಲೇ ಇದ್ದಾರೆ 3 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು: ಭಾಸ್ಕರ್ ರಾವ್

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಶೃಂಗ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 7:49 IST
Last Updated 30 ಜನವರಿ 2020, 7:49 IST
   

ಬೆಂಗಳೂರು: ‘ನಗರದಲ್ಲಿ ಮೂರು ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರಿದ್ದು, ಅವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ’ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಂದು ದಿನದ ಶೃಂಗ’ದಲ್ಲಿ ಮಾತನಾಡಿ, ‘ಇತ್ತೀಚೆಗೆ ಬಾಂಗ್ಲಾದೇಶದಿಂದ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅವರಲ್ಲಿ ಬಹುತೇಕರು ಕಟ್ಟಡ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ದಿನಕ್ಕೆ ಕೇವಲ ₹ 150ಗೆ ದುಡಿಯಲು ಸಿದ್ಧವಿರುವುದರಿಂದ ಬಿಲ್ಡರ್‌ಗಳು ಹಾಗೂ ಗುತ್ತಿಗೆದಾರರು ಅವರನ್ನೇ ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿನ ಕಾರ್ಮಿಕರು ₹ 300ನಿಂದ ₹ 600 ವರೆಗೆ ಬೇಡಿಕೆ ಇಡುತ್ತಿದ್ದಾರೆ. ಇದರಿಂದಾಗಿ ಬಾಂಗ್ಲಾದ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ. ಮಾನವ ಕಳ್ಳಸಾಗಣೆ ಹೆಚ್ಚಲು ಇದೇ ಪ್ರಮುಖ ಕಾರಣ’ ಎಂದು ಹೇಳಿದರು.

‘ನಗರದಲ್ಲಿ ಕಟ್ಟಡಗಳ ನಿರ್ಮಾಣದ ವೇಳೆ ಅವಘಡಕ್ಕೆ ತುತ್ತಾಗಿ ಐದು ವರ್ಷಗಳಲ್ಲಿ 356 ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರುಮತ್ತು ಕಟ್ಟಡ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರ್ಮಿಕರುವಾಸಿಸುವ ತಾಣಗಳಲ್ಲಿ ಕಳ್ಳತನಗಳು, ಅತ್ಯಾಚಾರಗಳು ಹಾಗೂ ಇನ್ನಿತರ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಜಗಳ- ಕದನಗಳು ಕೊಲೆಗಳಲ್ಲಿ ಅಂತ್ಯಗೊಳ್ಳುತ್ತಿವೆ. ಆದ್ದರಿಂದ ಕಟ್ಟಡ ಕಾರ್ಮಿಕರಿಗೆ ಸೂಕ್ತ ನೆಲೆ ಒದಗಿಸಬೇಕಿದೆ’ ಎಂದು ತಿಳಿಸಿದರು.

ADVERTISEMENT

ಖಾಲಿ ಇರುವ ಹುದ್ದೆಗಳು ಭರ್ತಿ: ಕಾರ್ಮಿಕ ಸಚಿವ ಎಸ್.ಸುರೇಶ್‌ ಕುಮಾರ್, ‘ಇಲಾಖೆ ವ್ಯಾಪ್ತಿಯ ಕಾರ್ಮಿಕ ಕಲ್ಯಾಣ ಮಂಡಳಿಗೆ ಶೀಘ್ರದಲ್ಲೇ ಜಂಟಿ ಕಾರ್ಮಿಕ ಆಯುಕ್ತರನ್ನು ನೇಮಕ ಮಾಡಲಾಗುವುದು. ಅಪಘಾತ ಹಾಗೂ ಅವಘಡಗಳು ಸಂಭವಿಸಿದಾಗ ಕಾರ್ಮಿಕರಿಗೆ ನ್ಯಾಯಯುತವಾಗಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇಲಾಖೆಯಲ್ಲಿ ಖಾಲಿ ಇರುವ ಶೇಕಡಾ 49 ರಷ್ಟು ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.