ADVERTISEMENT

ನಗರದ ವಿವಿಧೆಡೆ ಮೂರು ಪ್ರತ್ಯೇಕ ಅಪಘಾತ: ಇಬ್ಬರ ಸಾವು, ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 16:08 IST
Last Updated 14 ಫೆಬ್ರುವರಿ 2025, 16:08 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ನಗರದ ಮೂರು ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಪಾದಚಾರಿ, ಆಟೊ ಚಾಲಕ ಮೃತಪಟ್ಟಿದ್ದಾರೆ. ನಾಲ್ವರು ಬೈಕ್‌ ಸವಾರರು ಗಾಯಗೊಂಡಿದ್ದಾರೆ.

ADVERTISEMENT

ಜ್ಞಾನ ಭಾರತಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಉಪಕಾರ ಲೇಔಟ್‌ ಬಳಿ ಸಂಭವಿಸಿದ ಅಪಘಾತದಲ್ಲಿ 35 ವರ್ಷದ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ.

ಉಪಕಾರ ಲೇಔಟ್‌ ಸೋಡಾ ಫ್ಯಾಕ್ಟರಿ ರೆಸ್ಟೋರೆಂಟ್ ಬಳಿ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದರು. ವೇಗವಾಗಿ ಬಂದ ಟ್ಯಾಂಕರ್‌ವೊಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ವಿಳಾಸ ಪತ್ತೆಯಾಗಿಲ್ಲ. ಅಪಘಾತಕ್ಕೆ ಕಾರಣವಾದ ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಆಟೊ ಚಾಲಕ ಸಾವು: ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಸಂಭವಿಸಿದ ಅಪಘಾತದಲ್ಲಿ ಆಟೊ ಚಾಲಕ ಮೃತಪಟ್ಟಿದ್ದಾರೆ.

ಕಸ್ತೂರಿ ಬಾ ನಗರದ ನಿವಾಸಿ ಸುರೇಶ್ ಮೃತ ಚಾಲಕ.

ಸುರೇಶ್ ಅವರು ಗುರುವಾರ ಬೆಳಿಗ್ಗೆ 5.45ರ ಸುಮಾರಿಗೆ ಅತಿ ವೇಗದಲ್ಲಿ ಆಟೊವನ್ನು ಚಾಲನೆ ಮಾಡಿಕೊಂಡು ತೆರಳುತ್ತಿದ್ದರು. ನಿಯಂತ್ರಣ ತಪ್ಪಿದ್ದರಿಂದ ಆಟೊ ಮಗುಚಿ ಬಿದ್ದಿತ್ತು. ಚಾಲಕ ಆಟೊದ ಕೆಳಕ್ಕೆ ಸಿಲುಕಿಕೊಂಡಿದ್ದರು. ಕೆಳಕ್ಕೆ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿದ್ದವರು ಚಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಲ್ಸೇತುವೆಯಲ್ಲಿ ಅಪಘಾತ: ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲ್ಸೇತುವೆಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಬೈಕ್‌ ಸವಾರರು ಗಾಯಗೊಂಡಿದ್ದಾರೆ.

ಗುಡ್ಡದಹಳ್ಳಿ ಹಾಗೂ ಗಂಗೊಂಡನಹಳ್ಳಿ ನಿವಾಸಿಗಳಾದ ಜಾಕೀರ್, ರೋಷನ್‌ ಪಾಷಾ, ನಿಜಾಮ್ ಹಾಗೂ ಸಾಹಿಲ್‌ ಗಾಯಗೊಂಡವರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಮೈಸೂರು ರಸ್ತೆಯ ಮೇಲ್ಸೇತುವೆಯಲ್ಲಿ ಬಿಎಂಟಿಸಿ ಹಾಗೂ ತಮಿಳುನಾಡಿನ ಖಾಸಗಿ ಬಸ್‌ಗಳು ತೆರಳುತ್ತಿದ್ದವು. ಬೆಳಿಗ್ಗೆ 5ರ ಸುಮಾರಿಗೆ ಎರಡು ಬೈಕ್‌ಗಳಲ್ಲಿ ನಾಲ್ವರು, ಮೈಸೂರು ವೃತ್ತದ ಕಡೆಯಿಂದ ಬರುತ್ತಿದ್ದರು. ಮುಂದೆ ಸಾಗುತ್ತಿದ್ದ ಬಸ್‌ಗಳ ಮಧ್ಯೆ ಸ್ವಲ್ಪ ಜಾಗವಿತ್ತು. ಎರಡು ಬೈಕ್‌ ಸವಾರರು, ಬಸ್ ಅನ್ನು ಹಿಂದಿಕ್ಕಲು ವೇಗವಾಗಿ ಬೈಕ್‌ಗಳನ್ನು ಚಲಾಯಿಸಿದರು. ನಿಯಂತ್ರಣ ತಪ್ಪಿದ ಬೈಕ್‌ನಲ್ಲಿದ್ದ ನಾಲ್ವರು ಕೆಳಕ್ಕೆ ಬಿದ್ದಿದ್ದರು. ಉರುಳಿ ಬಿದ್ದ ರಭಸಕ್ಕೆ ಇಬ್ಬರು ಬಿಎಂಟಿಸಿ ಬಸ್‌ನ ತಳಭಾಗದಲ್ಲಿ ಸಿಲುಕಿಕೊಂಡಿದ್ದರು ಎಂದು ಸಂಚಾರ ಪೊಲೀಸರು ಹೇಳಿದರು.

ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ತಮಿಳುನಾಡು ನೋಂದಣಿ ಸಂಖ್ಯೆಯ ಬಸ್‌ ಅನ್ನು ಚಾಲಕ ನಿಲ್ಲಿಸದೇ ತೆರಳಿದ್ದಾನೆ. ಚಾಲಕನನ್ನು ಪತ್ತೆ ಮಾಡಲಾಗುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಅಪಘಾತದ ಕಾರಣಕ್ಕೆ ಮೇಲ್ಸೇತುವೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಒಂದು ತಾಸಿನ ನಂತರ ಬಿಎಂಟಿಸಿ ಬಸ್ ಹಾಗೂ ಬೈಕ್‌ ತೆರವು ಮಾಡಿ ವಾಹನಗಳ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.