ADVERTISEMENT

ವಿಶ್ವ ದರ್ಶಕಕ್ಕೆ ನಗರದ ‘ಯಂತ್ರಾಂಶ’

ಟಿಎಂಟಿ ನಿರ್ಮಾಣಕ್ಕೆ ಭಾರತದ ಪಾಲುದಾರಿಕೆ * ಬೆಂಗಳೂರಿನಲ್ಲಿ ಉದ್ಯೋಗಗಳು ಸೃಷ್ಟಿ

ಗುರು ಪಿ.ಎಸ್‌
Published 30 ಜುಲೈ 2019, 4:22 IST
Last Updated 30 ಜುಲೈ 2019, 4:22 IST
ಟಿಎಂಟಿ
ಟಿಎಂಟಿ   

ಬೆಂಗಳೂರು: ಭೂಮಿಯಂತಹ ಇನ್ನೊಂದು ಗ್ರಹವಿದೆಯೇ ಎಂಬುದನ್ನು ನಿಖರವಾಗಿ ಪರೀಕ್ಷಿಸಲಿರುವ ದೂರದರ್ಶಕ ‘ಥರ್ಟಿ ಮೀಟರ್‌ ಟೆಲಿಸ್ಕೋಪ್‌’ (ಟಿಎಂಟಿ) ಅಭಿವೃದ್ಧಿ ಮತ್ತು ನಿರ್ಮಾಣ ಯೋಜನೆಯಲ್ಲಿ ಭಾರತ ಕೈಜೋಡಿಸಿದೆ. ಹೆಮ್ಮೆಯ ವಿಷಯವೇನೆಂದರೆ, ಈ ಟಿಎಂಟಿಯ ಯಂತ್ರಾಂಶಗಳು ಮತ್ತು ಬಿಡಿಭಾಗಗಳು ತಯಾರಾಗುವುದು ಬೆಂಗಳೂರಿನಲ್ಲಿ.

₹10,000 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಭಾರತವು ಶೇ 10ರಷ್ಟು ಪಾಲನ್ನು ಭರಿಸಲಿದೆ. ಈ ಪೈಕಿ, ಶೇ 70ರಷ್ಟು ನೆರವು ಬಿಡಿಭಾಗಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದ್ದು, ಉಳಿದ ಶೇ 30ರಷ್ಟು ನೆರವನ್ನು ಹಣಕಾಸಿನ ರೂಪದಲ್ಲಿ ನೀಡಲಾಗುತ್ತದೆ. 2030ರ ವೇಳೆಗೆ, ಅಮೆರಿಕದ ಹವಾಯಿಯಲ್ಲಿ ಟಿಎಂಟಿ ಕಾರ್ಯಾರಂಭ ಮಾಡಲಿದೆ.

‘ಟಿಎಂಟಿಗೆ ಬಿಡಿಭಾಗ ಹಾಗೂ ಉಪಕರಣಗಳನ್ನು ತಯಾರಿಸಲು ದೇಶದ 39 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಹೆಚ್ಚಿನ ಕಂಪನಿಗಳು ಮತ್ತು ಸಂಸ್ಥೆಗಳು ಇರುವುದು ಬೆಂಗಳೂರಿನಲ್ಲಿ. ವಿನ್ಯಾಸ ಮತ್ತು ಅಭಿವೃದ್ಧಿಯ ಜೊತೆಗೆ, ಯಂತ್ರಾಂಶಗಳನ್ನು ಒದಗಿಸುವ ಕೆಲಸವನ್ನು ಈ ಕಂಪನಿಗಳು ಮಾಡಲಿವೆ’ ಎಂದು ಟಿಎಂಟಿ ಇಂಡಿಯಾದ ಯೋಜನಾ ವಿಜ್ಞಾನಿ ರಮ್ಯಾ ಸೇತುರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ನಗರದಕೋರಮಂಗಲದಲ್ಲಿರುವ ಭಾರತೀಯ ಖಭೌತವಿಜ್ಞಾನ ಸಂಸ್ಥೆಯ (ಐಐಎ) ಕೇಂದ್ರದಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಬಿಡಿಭಾಗಗಳ ತಯಾರಿಕೆ ಸಂದರ್ಭದಲ್ಲಿ ಈ ಕಂಪನಿಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

‘ವಿಶ್ವದ ಪ್ರತಿಷ್ಠಿತ ಯೋಜನೆ ಇದು. ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದರೆ ಸಹಜವಾಗಿ ಜಗತ್ತಿನ ಗಮನ ಸೆಳೆಯಬಹುದು. ಹೊಸ ಯೋಜನೆಗಳು ಈ ಕಂಪನಿಗೆ ನಿಸ್ಸಂದೇಹವಾಗಿ ಸಿಗುತ್ತವೆ. ಆಗ, ಸಹಜವಾಗಿಯೇ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ರಮ್ಯಾ ವಿವರಿಸಿದರು.

ಯೋಜನೆಗೆ ಕೈಜೋಡಿಸಿರುವ ನಗರದ ಕಂಪನಿಗಳು ಮತ್ತು ಸಂಸ್ಥೆಗಳು: ಅವಸರಳ ಟೆಕ್ನಾಲಜೀಸ್, ಅಮಾಡೊ ಟೂಲ್ಸ್, ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್ಡ್‌ ಕಂಪ್ಯೂಟಿಂಗ್, ಸೆಂಟ್ರಲ್‌ ಮ್ಯಾನುಫ್ಯಾಕ್ಚರಿಂಗ್‌ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್‌, ಎಲೈಟ್‌ ಮೆಟ್ರಾಲಜಿ, ಫ್ಯೂಚರ್‌ ಟೆಕ್‌ ಎಂಜಿನಿ ಯರಿಂಗ್‌, ಐಐಎಸ್‌ಸಿ, ಐಪಿಎ, ಎನ್‌ಎಎಲ್‌, ಆಪ್ಟಿಕ್ಸ್‌ ಆ್ಯಂಡ್‌ ಅಲೈಡ್‌ ಎಂಜಿನಿಯರಿಂಗ್‌, ಪ್ಲ್ಯಾನ್‌ ಮೆಜರಿಂಗ್‌ ಸರ್ವಿಸಸ್‌, ಎಸ್‌ಜಿಎಸ್‌ ಇಂಡಿಯಾ, ಸಿಲ್ವರ್‌ ಗ್ರೇ ಎಂಜಿನಿಯರ್ಸ್‌, ಸದರ್ನ್‌ ಎಲೆಕ್ಟ್ರಾನಿಕ್ಸ್‌, ಟಿಯುವಿ ರೀನ್‌ಲ್ಯಾಂಡ್‌ ಹಾಗೂ ಟೆಕ್ನೊ ಟೂಲ್ಸ್‌ ಪ್ರಿಸಿಷನ್‌ ಎಂಜಿನಿಯರಿಂಗ್‌.

ಟಿಎಂಟಿಯ ವಿಶೇಷವೇನು?
* ಈ ದೂರದರ್ಶಕವು ವಿಶ್ವದ ವಿಕಾಸವನ್ನು ವಿವಿಧ ಮಾನದಂಡಗಳಲ್ಲಿ ಅರ್ಥ ಮಾಡಿಕೊಳ್ಳಲು ಮತ್ತು ವಿಶ್ವದ ನಿಗೂಢ ರಹಸ್ಯ ತಿಳಿಯಲು ನೆರವಾಗುತ್ತದೆ.

* ಟಿಎಂಟಿಯ ಬೆಳಕಿನ ಸಂಗ್ರಹ ಸಾಮರ್ಥ್ಯ ಈಗಿರುವ 10 ಮೀಟರ್‌ ಟೆಲಿಸ್ಕೋಪ್‌ಗಳಿಗಿಂತ 9 ಪಟ್ಟು ಉತ್ತಮವಾಗಿರಲಿದೆ.

* ನಕ್ಷತ್ರಗಳು, ಅನ್ಯಗ್ರಹಗಳಿಂದ ಹಿಡಿದು ನಮ್ಮ ಸೌರವ್ಯೂಹದಲ್ಲಿರುವ ಸಣ್ಣ ಅಥವಾ ದೂರದ ಆಕಾಶಕಾಯಗಳನ್ನು ಈ ಟಿಎಂಟಿ ಮೂಲಕ ವೀಕ್ಷಿಸಬಹುದು.

* ಇತರ ನಕ್ಷತ್ರಗಳ ಸುತ್ತ ಸುತ್ತುವ ಭೂಮಿಯಂತಹ ಗ್ರಹಗಳನ್ನು ಕೂಡ ಇದರ ಸಹಾಯದಿಂದ ಕಂಡುಹಿಡಿಯಬಹುದು

ವಿಭಜಿತ ದರ್ಪಣ
ನೈಜ ಸಮಯದಲ್ಲಿ ವಾತಾವರಣದಲ್ಲಿ ಆಗುವ ಪ್ರಕ್ಷುಬ್ಧತೆಯನ್ನು ಇವು ಗ್ರಹಿಸುತ್ತವೆ. ದೂರದರ್ಶಕದ ಮೇಲೆ ಬೀಳುವ ಬೆಳಕಿನ ಕಿರಣಗಳು ಭೂಮಿಯ ವಾತಾವರಣದಿಂದ ಮಸುಕಾಗುವ ಪರಿಣಾಮಗಳನ್ನು ತೆಗೆದುಹಾಕಲು ಸಹಕರಿಸುತ್ತವೆ. ಈ ಟಿಎಂಟಿ ಬಳಸಿ ಭೂಮಿಯಿಂದ ಪಡೆದ ಚಿತ್ರಗಳು ಬಾಹ್ಯಾಕಾಶದಿಂದ ವೀಕ್ಷಿಸಿ ಪಡೆದ ಚಿತ್ರದ ಗುಣಮಟ್ಟಕ್ಕೆ ಸಮನಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.