ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಲು ಕಾನೂನು ಬಲಗೊಳಿಸುವ ಜತೆಗೆ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳದಂತಹ ಕ್ರಮಕೈಗೊಳ್ಳಬೇಕು’ ಎಂದು ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ ಆಗ್ರಹಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಎಸ್.ಜೆ. ಚಂದರ್, ‘ತಂಬಾಕು ಕಂಪನಿಗಳು ಮಕ್ಕಳನ್ನೇ ಗುರಿಯಾಗಿಸಿಕೊಂಡಿವೆ. ಈ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ತಂಬಾಕು ರಹಿತ ದಿನವಾದ ಇದೇ 31ರಂದು ವೆಬಿನಾರ್ ಹಮ್ಮಿಕೊಂಡಿದ್ದು, ವಿವಿಧ ಸುಮಾರು 15 ವಿಶ್ವವಿದ್ಯಾಲಯಗಳು ಪಾಲ್ಗೊಳ್ಳಲಿವೆ’ ಎಂದು ಹೇಳಿದರು.
‘ಆಕರ್ಷಕ ಜಾಹೀರಾತುಗಳ ಮೂಲಕ ತಂಬಾಕು ಉತ್ಪನ್ನಗಳ ಬಳಕೆಗೆ ಯುವಜನರು, ಮಕ್ಕಳಿಗೆ ಪ್ರಚೋದಿಸಲಾಗುತ್ತಿದೆ. ಮಕ್ಕಳು ಹಾಗೂ ಯುವಜನರು ವ್ಯಸನಿಗಳಾಗುವುದನ್ನು ತಡೆಯಲು ತಂಬಾಕು ಉತ್ಪನ್ನಗಳಿಗೆ ತೆರಿಗೆ ಹೆಚ್ಚಳ ಅನಿವಾರ್ಯ’ ಎಂದರು.
‘ದೇಶದಲ್ಲಿ ವರದಿಯಾಗುತ್ತಿರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 50ರಷ್ಟು ಪ್ರಕರಣಗಳು ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳಾಗಿವೆ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ’ ಎಂದು ಅವರು ಉಲ್ಲೇಖಿಸಿದರು.
ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಪ್ರೇರಣಾ, ‘ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.