ADVERTISEMENT

ಸಾರ್ವಜನಿಕ ಸ್ಥಳದಲ್ಲಿ ತಂಬಾಕು, ಧೂಮಪಾನ ನಿಷೇಧ: ಜಾಗೃತಿಗೆ ‘ಆಟೊ ಅಭಿಯಾನ’

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 15:35 IST
Last Updated 11 ಫೆಬ್ರುವರಿ 2025, 15:35 IST
ಬಿಬಿಎಂಪಿಯ ‘ಆಟೊ ಅಭಿಯಾನ’ಕ್ಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್‌‌ ಚಾಲನೆ ನೀಡಿದರು. ವಿಶೇಷ ಆಯುಕ್ತ ಕರೀಗೌಡ ಉಪಸ್ಥಿತರಿದ್ದರು
ಬಿಬಿಎಂಪಿಯ ‘ಆಟೊ ಅಭಿಯಾನ’ಕ್ಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್‌‌ ಚಾಲನೆ ನೀಡಿದರು. ವಿಶೇಷ ಆಯುಕ್ತ ಕರೀಗೌಡ ಉಪಸ್ಥಿತರಿದ್ದರು   

ಬೆಂಗಳೂರು: ತಂಬಾಕು ಸೇವನೆಯ ಅಪಾಯಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ವತಿಯಿಂದ ‘ಆಟೊ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.

ಬಿಬಿಎಂಪಿ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿರುವ ಬ್ಲೂಮ್‌ಬರ್ಗ್ ಫಿಲಾಂತ್ರಪೀಸ್ ಬೆಂಬಲಿತ ‘ಆರೋಗ್ಯಕರ ನಗರಗಳ ಪಾಲುದಾರಿಕೆ’ಯೊಂದಿಗಿನ ಸಹಭಾಗಿತ್ವದಲ್ಲಿ ಅಭಿಯಾನ ಆಯೋಜಿಸಲಾಗಿದೆ. ತಂಬಾಕಿನ ಹಾನಿಕಾರಕ ಪರಿಣಾಮಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದ ಅಪಾಯಗಳು ಮತ್ತು ಹುಕ್ಕಾ ನಿಷೇಧದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್‌‌ ತಿಳಿಸಿದರು.

16 ಬ್ರ್ಯಾಂಡ್‌ ಆಟೋರಿಕ್ಷಾಗಳು ನಗರದ ಅತ್ಯಂತ ಜನದಟ್ಟಣೆಯ ಪ್ರದೇಶಗಳಲ್ಲಿ ಸಂಚರಿಸಲಿದ್ದು, ಸಾರ್ವಜನಿಕರಿಗೆ ಅರಿವು ಮೂಡಿಸುವ ಸಂದೇಶಗಳನ್ನು ಪ್ರಸಾರ ಮಾಡುತ್ತವೆ. ಒಂದು ವಾರ ನಡೆಯಲಿರುವ ಈ ಅಭಿಯಾನವು, ತಂಬಾಕು ನಿಯಂತ್ರಣ ಕಾನೂನುಗಳ ಪಾಲನೆಯನ್ನು ಬಲಗೊಳಿಸಲು ಮತ್ತು ಆರೋಗ್ಯಕರ ಬೆಂಗಳೂರನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ ಎಂದರು.

ADVERTISEMENT

‘ನಮ್ಮ ಮಕ್ಕಳು– ನಮ್ಮ ಭವಿಷ್ಯ. ತಂಬಾಕಿನ ಅಪಾಯಗಳಿಂದ ಅವರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಅಭಿಯಾನವು ಧೂಮಪಾನದಿಂದ ಆರೋಗ್ಯದ ಮೇಲಾಗುವ ಅಪಾಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತದೆ. ಹುಕ್ಕಾ ಮತ್ತು ಇ-ಸಿಗರೇಟ್‌ಗಳ ನಿಷೇಧವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತದೆ’ ಎಂದು ಹೇಳಿದರು.

‘ಆರೋಗ್ಯಕರ ನಗರಗಳ ಪಾಲುದಾರಿಕೆ - ಸ್ಮೋಕ್ ಫ್ರೀ’ ಬೆಂಗಳೂರು ಉಪಕ್ರಮದ ಯೋಜನಾ ನಿರ್ದೇಶಕಿ ಡಾ. ತ್ರಿವೇಣಿ, ‘ಯುವ ಜನತೆಯನ್ನು ತಂಬಾಕಿನ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುವ ಮತ್ತು ಸಾರ್ವಜನಿಕ ಸ್ಥಳಗಳನ್ನು ಧೂಮಪಾನದ ಹೊಗೆಯಿಂದ ಮುಕ್ತಗೊಳಿಸುವುದನ್ನು ಖಾತರಿಪಡಿಸುವುದಕ್ಕೆ ಈ ಅಭಿಯಾನ ನಡೆಸಲಾಗುತ್ತದೆ’ ಎಂದರು.

ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್‌ ಸಿರಾಜುದ್ದೀನ್ ಮದಿನಿ, ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಧಿಕಾರಿ ಡಾ. ಕುಮಾರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.