ADVERTISEMENT

ಸಿಲಿಕಾನ್‌ ಸಿಟಿ ಧೂಮಪಾನ ಮುಕ್ತ ನಗರ

ಎಪಿಸಿಎಟಿ ಪುರಸ್ಕಾರಕ್ಕೆ ಭಾಜನ * ಇಂಡೊನೇಷ್ಯಾದಲ್ಲಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 20:19 IST
Last Updated 28 ಸೆಪ್ಟೆಂಬರ್ 2019, 20:19 IST
ಡಾ. ತ್ರಿವೇಣಿ ಬಿ.ಎಸ್ ಪ್ರಶಸ್ತಿ ಸ್ವೀಕರಿಸಿದರು. ಬೊಗೋರ್ ಮೇಯರ್‌ ಬಿಮಾ ಆರ್ಯ ಸುಗಿಯಾರ್ಟೊ, ಬಾಲನಗರದ ಮೇಯರ್ ಫ್ರಾನ್ಸಿಸ್ ಆಂಥೋನಿ ಇದ್ದರು.
ಡಾ. ತ್ರಿವೇಣಿ ಬಿ.ಎಸ್ ಪ್ರಶಸ್ತಿ ಸ್ವೀಕರಿಸಿದರು. ಬೊಗೋರ್ ಮೇಯರ್‌ ಬಿಮಾ ಆರ್ಯ ಸುಗಿಯಾರ್ಟೊ, ಬಾಲನಗರದ ಮೇಯರ್ ಫ್ರಾನ್ಸಿಸ್ ಆಂಥೋನಿ ಇದ್ದರು.   

ಬೆಂಗಳೂರು: ಧೂಮಪಾನ ನಿಯಂತ್ರಣದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ ನಗರಗಳಿಗೆ ಜಾಗತಿಕ ಮಟ್ಟದಲ್ಲಿ ಕೊಡುವ ‘ಎಪಿಸಿಎಟಿ’ ಪುರಸ್ಕಾರಕ್ಕೆ ಬೆಂಗಳೂರು ಭಾಜನವಾಗಿದೆ.

‘ಏಷಿಯಾ ಪೆಸಿಫಿಕ್ ಸಿಟೀಸ್ ಅಲಯನ್ಸ್ ಫಾರ್ ಟೊಬ್ಯಾಕೊ ಕಂಟ್ರೋಲ್ ಆ್ಯಂಡ್‌ ಎನ್‍ಸಿಡಿಎಸ್ ಪ್ರಿವೆನ್‌ಷನ್’ ಧೂಮಪಾನ ನಿಯಂತ್ರಣಕ್ಕೆ ಪ್ರಶಸ್ತಿ ನೀಡುತ್ತಿದ್ದು,ಇಂಡೊನೇಷ್ಯಾದಬೊಗೋರ್‌ನಲ್ಲಿ ನಡೆದಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಪುರಸ್ಕಾರ ಸ್ವೀಕರಿಸಿದ ಸ್ಮೋಕ್‌ ಫ್ರೀ ಬೆಂಗಳೂರಿನ ಯೋಜನಾ ನಿರ್ದೇಶಕಿ ಡಾ.ತ್ರಿವೇಣಿ ಬಿ.ಎಸ್, ‘ಬೆಂಗಳೂರಿಗರಿಗೆ ಇದು ಹೆಮ್ಮೆಯ ಕ್ಷಣ. ನಾಗರಿಕರನ್ನು ಪರೋಕ್ಷ ಧೂಮಪಾನದಿಂದ ರಕ್ಷಿಸಲು ಕ್ರಮ ಕೈಗೊಂಡ ನಗರದ ಅಧಿಕಾರಿಗಳ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಹೃದ್ರೋಗ ಸೇರಿದಂತೆ ಹಲವು ಸಾಂಕ್ರಾಮಿಕವಲ್ಲದ ರೋಗಗಳು ಬರಲು ಪರೋಕ್ಷ ಧೂಮಪಾನ ಪ್ರಮುಖ ಕಾರಣ’ ಎಂದರು.

ADVERTISEMENT

ಬೆಂಗಳೂರು ಮಹಾನಗರ ಪಾಲಿಕೆಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಮುಖ್ಯಸ್ಥೆ ಡಾ.ಎಸ್.ಕೆ. ಸವಿತಾ,‘ಧೂಮಪಾನ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಫಲವಾಗಿ ಜಾಗತಿಕ ಮಟ್ಟದಲ್ಲಿ ನಗರ ಪ್ರಶಸ್ತಿಗೆ ಭಾಜನವಾಗಿದೆ. ಪರೋಕ್ಷ ಧೂಮಪಾನದಿಂದ ಆಗುವಹಾನಿಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ
ಅಭಿಯಾನವನ್ನು ನಡೆಸಲಾಗಿತ್ತು. ಭಿತ್ತಿಫಲಕಗಳ ಮೂಲಕ ಸಹ ಜಾಗೃತಿ ಮೂಡಿಸಲಾಗಿದೆ. ಇದರಿಂದಗಾಗಿ ಧೂಮಪಾನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ’ ಎಂದು ತಿಳಿಸಿದರು.

‘ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (ಜಿಎಟಿಎಸ್) ಪ್ರಕಾರ ಧೂಮಪಾನಿಗಳಲ್ಲದವರು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿನ ಹೊಗೆ ಸೇವಿಸುವ ಪ್ರಮಾಣ ಶೇ 23.9 ರಷ್ಟಿದೆ. ಇದರಲ್ಲಿ ಶೇ 14 ರಷ್ಟು ಮಂದಿ ಖಾನಾವಳಿ, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಪರೋಕ್ಷ ಧೂಮಪಾನ ಮಾಡುತ್ತಿದ್ದಾರೆ. ವಾಹನದ ಹೊಗೆ ಸಹ ಧೂಮಪಾನದಷ್ಟೇ ಹಾನಿಕರ ಎನ್ನುವುದಕ್ಕೆ ಸಾಕ್ಷ್ಯಗಳಿವೆ. ಧೂಮಪಾನದ ವಿರುದ್ಧದ ಕಾನೂನುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಧೂಮಪಾನ ಮುಕ್ತ ನಗರ ನಿರ್ಮಾಣ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.