ADVERTISEMENT

ದ್ವಿಚಕ್ರ ವಾಹನ ಮರಳಿಸಲು ಲಂಚ: ಟೋಯಿಂಗ್‌ ಸಿಬ್ಬಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 17:41 IST
Last Updated 28 ಸೆಪ್ಟೆಂಬರ್ 2021, 17:41 IST
   

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ನಿಲುಗಡೆ ಮಾಡಿದ್ದ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ದ್ವಿಚಕ್ರ ವಾಹನವನ್ನು ಅಧಿಕೃತವಾಗಿ ದಂಡ ಕಟ್ಟಿಸಿಕೊಳ್ಳದೇ ಹಿಂದಿರುಗಿಸಲು ₹ 800 ಲಂಚ ಪಡೆದ ಜಯನಗರ ಸಂಚಾರ ಪೊಲೀಸ್‌ ಠಾಣೆಯ ಟೋಯಿಂಗ್‌ ವಿಭಾಗದ ಖಾಸಗಿ ಸಿಬ್ಬಂದಿಯೊಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಮಲ್ಲೇಶ್ವರ ನಿವಾಸಿಯೊಬ್ಬರು ಜೆ.ಪಿ. ನಗರದ ಶಾಂತಿ ಸಾಗರ್‌ ಹೋಟೆಲ್‌ ಮುಂಭಾಗದಲ್ಲಿ ಶನಿವಾರ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನವನ್ನು ಜಯನಗರ ಸಂಚಾರ ಪೊಲೀಸ್‌ ಠಾಣೆಯ ಟೋಯಿಂಗ್‌ ಸಿಬ್ಬಂದಿ ಎಳೆದೊಯ್ದಿದ್ದರು. ಟೋಯಿಂಗ್‌ ಸಿಬ್ಬಂದಿಯನ್ನು ಸಂಪರ್ಕಿಸಿದ್ದ ವಾಹನ ಮಾಲೀಕರು, ದ್ವಿಚಕ್ರ ವಾಹನವನ್ನು ಬಿಡುವಂತೆ ಮನವಿ ಮಾಡಿದ್ದರು. ‘₹ 1,150 ದಂಡ ಶುಲ್ಕವಿದೆ. ದಂಡವಿಲ್ಲದೇ ವಾಹನ ಬಿಟ್ಟುಕೊಡಲು ₹ 800 ಲಂಚ ನೀಡಬೇಕು’ ಎಂದು ಟೋಯಿಂಗ್‌ ಸಿಬ್ಬಂದಿ ಬೇಡಿಕೆ ಇಟ್ಟಿದ್ದರು. ಈ ಕುರಿತು ವಾಹನ ಮಾಲೀಕರು ಎಸಿಬಿಯ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.

ಮಂಗಳವಾರ ಮಧ್ಯಾಹ್ನ ವಾಹನ ಪಡೆಯಲು ಜಯನಗರ ಸಂಚಾರ ಪೊಲೀಸ್‌ ಠಾಣೆಗೆ ತೆರಳಿದ್ದ ದೂರುದಾರರಿಂದ ಟೋಯಿಂಗ್‌ ಸಿಬ್ಬಂದಿ ₹800 ಲಂಚ ಪಡೆಯುತ್ತಿದ್ದಾಗ ದಾಳಿಮಾಡಿದ ಎಸಿಬಿ ಅಧಿಕಾರಿಗಳು, ಆರೋಪಿಯನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.