ನಮ್ಮ ಮೆಟ್ರೊ
ಬೆಂಗಳೂರು: ಮೆಟ್ರೊ ಪ್ರಯಾಣ ದರವನ್ನು ವಿಪರೀತವಾಗಿ ಏರಿಸಿ ಪ್ರಯಾಣಿಕರಿಗೆ ಹೊರೆ ಹೊರಿಸಿದ್ದ ಬಿಎಂಆರ್‌ಸಿಎಲ್ ಈಗ ನಿಲ್ದಾಣಗಳಲ್ಲಿ ಇರುವ ಶೌಚಾಲಯಕ್ಕೆ ಬಳಕೆದಾರರ ಶುಲ್ಕ ವಿಧಿಸಲು ನಿರ್ಧರಿಸಿದೆ. ಮೊದಲ ಹಂತವಾಗಿ 12 ನಿಲ್ದಾಣಗಳಲ್ಲಿ ಶುಲ್ಕ ಸಂಗ್ರಹ ಆರಂಭಿಸಿದೆ.
ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯ ಪ್ರಕಾಶ್ ನಗರ, ಯಲಚೇನಹಳ್ಳಿ, ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ - ಸೆಂಟ್ರಲ್ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ನಿಲ್ದಾಣ - ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೊ ನಿಲ್ದಾಣಗಳಲ್ಲಿ ಬಳಕೆದಾರರ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ.
‘ನಾಲ್ಕು ತಿಂಗಳ ಹಿಂದೆ ಮೆಟ್ರೊ ದರವನ್ನು ಶೇಕಡ 71ರಷ್ಟು ಏರಿಕೆ ಮಾಡಿದ್ದರು. ಮೆಟ್ರೊ ಆರಂಭವಾದಾಗಿನಿಂದ ಮೆಟ್ರೊ ನಿಲ್ದಾಣಗಳಲ್ಲಿ ಶೌಚಾಲಯವನ್ನು ಉಚಿತವಾಗಿ ಬಳಕೆ ಮಾಡಬಹುದಿತ್ತು. ಈಗ ಅದಕ್ಕೂ ದರ ವಿಧಿಸಲು ಆರಂಭಿಸಿರುವುದು ಉತ್ತಮ ಬೆಳವಣಿಗೆಯಲ್ಲ. ಮೆಟ್ರೊ ನಿಲ್ದಾಣಗಳಿಗೆ ಮೆಟ್ರೊ ಪ್ರಯಾಣಿಕರಲ್ಲದೇ ಬೇರೆ ಯಾರೂ ಬರುವುದಿಲ್ಲ. ಏನೇನೋ ಕಾರಣ ನೀಡಿ ಶೌಚಾಲಯ ಬಳಕೆಗೆ ದರ ನಿಗದಿ ಮಾಡಿದ್ದಾರೆ’ ಎಂದು ಮೆಟ್ರೊ ಪ್ರಯಾಣಿಕ ರಾಕೇಶ್ ಆಕ್ರೋಶ ವ್ಯಕ್ತಪಡಿಸಿದರು.
‘ಸುಲಭ್ ಶೌಚಾಲಯ ಇಂಟರ್‌ನ್ಯಾಷನಲ್ ಸಂಸ್ಥೆಗೆ ಶೌಚಾಲಯ ನಿರ್ವಹಣೆಯನ್ನು ವಹಿಸಲಾಗಿದೆ. ಅವರು ನಿರ್ವಹಣಾ ವೆಚ್ಚವನ್ನಷ್ಟೇ ಸಂಗ್ರಹಿಸುತ್ತಿದ್ದಾರೆ. ಮೂತ್ರ ವಿಸರ್ಜನೆಗೆ ₹ 2, ಶೌಚಾಲಯ ಬಳಕೆಗೆ ₹ 5 ನಿಗದಿಪಡಿಸಿದ್ದು, ಇದು ಎಲ್ಲ ಕಡೆ ಇರುವ ದರವೇ ಆಗಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.
‘ಅಲ್ಲದೇ ಎಲ್ಲ ನಿಲ್ದಾಣಗಳಲ್ಲಿ ಶೌಚಾಲಯಗಳಿಗೆ ಬಳಕೆದಾರರ ಶುಲ್ಕ ನಿಗದಿ ಮಾಡುವುದಿಲ್ಲ. ಮೆಟ್ರೊ ಸ್ವೈಪ್ ಗೇಟ್ ಒಳಗೆ ಇರುವ ಶೌಚಾಲಯಗಳ ಬಳಕೆ ಮುಂದೆಯೂ ಉಚಿತವಾಗಿಯೇ ಇರುತ್ತದೆ. ಮೆಟ್ರೊ ಸ್ವೈಪ್ ಗೇಟ್‌ಗಿಂತ ಹೊರಗೆ ಇರುವ ಶೌಚಾಲಯಗಳನ್ನು ಮೆಟ್ರೊ ಪ್ರಯಾಣಿಕರಲ್ಲದೇ ಬೇರೆ ಸಾರ್ವಜನಿಕರೂ ಬಳಸುತ್ತಾರೆ. ಅದಕ್ಕಾಗಿ ಅವುಗಳಿಗಷ್ಟೇ ಶುಲ್ಕ ನಿಗದಿ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.