
ಕೆ.ಆರ್.ಪುರ: ಸಂತೆಯಲ್ಲಿ ರೈತರ ಹಾಗೂ ವ್ಯಾಪಾರಸ್ಥರ ಬಳಿ ಕಾನೂನುಬದ್ಧ ಸುಂಕ ವಸೂಲಾತಿಗೆ ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ ಪೂರ್ವ ನಗರ ಪಾಲಿಕೆ ಮುಂಭಾಗ ಸುಂಕ ವಸೂಲಿಗಾರರು ಪ್ರತಿಭಟನೆ ನಡೆಸಿದರು.
ಕಾನೂನುಬದ್ಧವಾಗಿ ಸುಂಕ ವಸೂಲು ಮಾಡಲಾಗುತ್ತಿದೆ. ಆದರೂ ಇದಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ನಿರಂತರವಾಗಿ ತೊಂದರೆ ಕೊಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗುತ್ತಿಗೆದಾರ ಅಂಜನಾಮೂರ್ತಿ ಆಗ್ರಹಿಸಿದರು.
‘ಕಳೆದ ವರ್ಷ ಸುಂಕ ವಸೂಲಾತಿ ಸಂಬಂಧ ಟೆಂಡರ್ ಕರೆಯಲಾಗಿತ್ತು. ಕಾನೂನು ಪ್ರಕಾರ ಟೆಂಡರ್ ಪಡೆದುಕೊಂಡಿದ್ದೇನೆ. ಈ ಸಂಬಂಧ ₹30 ಲಕ್ಷ ಠೇವಣಿ ಇಡಲಾಗಿದೆ. ಪಾಲಿಕೆ ನಿರ್ದೇಶನದಂತೆ ಪ್ರತಿ ತಿಂಗಳು ₹10 ಲಕ್ಷ ತಪ್ಪದೆ ಪಾವತಿ ಮಾಡುತ್ತಿದ್ದೇನೆ. ಇತ್ತೀಚೆಗೆ ಗುತ್ತಿಗೆ ಅವಧಿ ಮುಗಿದಿದ್ದು, ಮರು ಟೆಂಡರ್ ಆಗುವವರೆಗೂ ಸುಂಕ ವಸೂಲಿ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ. ಆದರೆ, ಈ ಹಿಂದೆ ಟೆಂಡರ್ ಪಡೆದಿದ್ದ ಎಲೆ ಶ್ರೀನಿವಾಸ್ ಮತ್ತು ಅವರ ಸಂಗಡಿಗರು ಸುಂಕ ವಸೂಲು ಮಾಡುವ ಹುಡುಗರ ವಿರುದ್ಧ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿದರು.
ಈ ವೇಳೆ ತರಕಾರಿ ಬಾಬು ದಿಲೀಪ್, ನಾಗರಾಜ, ನಟರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.