ADVERTISEMENT

ತುಮಕೂರು ರಸ್ತೆ: ಸುಂಕ ಸಂಗ್ರಹಿಸದಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 16:36 IST
Last Updated 8 ಫೆಬ್ರುವರಿ 2022, 16:36 IST

ಬೆಂಗಳೂರು: ತುಮಕೂರು ರಸ್ತೆ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ 45 ದಿನಗಳಿಂದ ಅವಕಾಶ ಇಲ್ಲದಿದ್ದರೂ, ಟೋಲ್ (ಸುಂಕ) ಸಂಗ್ರಹ ಮಾಡುತ್ತಿರುವುದು ಅಕ್ರಮ ಎಂದು ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್‌) ಪಕ್ಷ ಆರೋಪಿಸಿದೆ.

ಮೇಲ್ಸೇತುವೆ ದುರಸ್ತಿಪಡಿಸುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ವಿಫಲವಾಗಿದೆ. ಸಂಚಾರ ದಟ್ಟಣೆಗಳ ನಡುವೆ ಸಿಗ್ನಲ್‌ಗಳಲ್ಲಿ ಕಾದು ವಾಹನಗಳನ್ನು ಚಲಾಯಿಸಬೇಕಾದ ಸ್ಥಿತಿ ಇದ್ದು, ಸವಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಕ್ರಮಿಸಬಹುದಾದ ದೂರಕ್ಕೆ ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಸ್ಥಿತಿ ಇದೆ. ಒಂದೆರಡು ದಿನಗಳಲ್ಲಿ ರಸ್ತೆ ಸರಿಯಾಗಲಿದೆ ಎಂದು ಜನ ಕಾಯುವುದು ತಪ್ಪಿಲ್ಲ ಎಂದು ಸಂಘಟನೆ ತಿಳಿಸಿದೆ.

‘ವಾಹನಗಳ ಹೊಗೆಯ ನಡುವೆ ಸಾಗಿದರೂ ನಾಗಸಂದ್ರದ ಬಳಿ ಪೂರ್ಣ ಪ್ರಮಾಣದ ಸುಂಕ ಪಾವತಿಸಬೇಕಾಗಿದೆ. ಎಲ್ಲ ರೀತಿಯ ತೆರಿಗೆ ಪಾವತಿಸಿಯೂ ರಸ್ತೆ ಬಳಕೆಗೆ ಸುಂಕ ನೀಡಬೇಕಾದ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ. ಸುಂಕ ಪಾವತಿಸಿದರೂ ಒಳ್ಳೆಯ ರಸ್ತೆ ಇಲ್ಲ. ಮೇಲ್ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ನೀಡದೆ ಸುಂಕ ಸಂಗ್ರಹ ಮಾಡುತ್ತಿರುವುದು ಸರಿಯಲ್ಲ. 45 ದಿನಗಳಿಂದ ಸಂಗ್ರಹಿಸಿರುವ ಸುಂಕವನ್ನು ವಾಪಸ್ ನೀಡಬೇಕು. ನಗದು ರೂಪದಲ್ಲಿ ಸಂಗ್ರಹವಾಗಿದ್ದರೆ ಅದನ್ನು ಸ್ಥಳೀಯ ಸಂಸ್ಥೆಗೆ ಒಪ್ಪಿಸಬೇಕು. ಮೇಲ್ಸೇತುವೆ ಸರಿಪಡಿಸುವ ತನಕ ಸುಂಕ ಸಂಗ್ರಹ ಮಾಡುವುದನ್ನು ನಿಲ್ಲಿಸಬೇಕು’ ಎಂದು ಕೆಆರ್‌ಎಸ್‌ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಮತ್ತು ಜಂಟಿ ಕಾರ್ಯದರ್ಶಿ ಯು.ಬಿ. ವಿಜಯಕುಮಾರ್ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.