ADVERTISEMENT

ಪ್ರಯಾಣಿಕರಿಗೆ ಟೋಲ್‌ ಏರಿಕೆ ಬಿಸಿ

ವಿಮಾನ ನಿಲ್ದಾಣ ರಸ್ತೆ ಪ್ರಯಾಣ ಈಗ ಮತ್ತಷ್ಟು ದುಬಾರಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 20:10 IST
Last Updated 1 ಏಪ್ರಿಲ್ 2019, 20:10 IST
ದೇವನಹಳ್ಳಿ ಟೋಲ್‌ ಪ್ಲಾಜಾ–ಸಂಗ್ರಹ ಚಿತ್ರ
ದೇವನಹಳ್ಳಿ ಟೋಲ್‌ ಪ್ಲಾಜಾ–ಸಂಗ್ರಹ ಚಿತ್ರ   

ಬೆಂಗಳೂರು: ಏರ್‌ಪೋರ್ಟ್‌ ರಸ್ತೆಯಲ್ಲಿ ಸಂಚರಿಸುವವರು ಇನ್ನುಮುಂದೆ ಟೋಲ್‌ ದರ ಹೆಚ್ಚಳದ ಬಿಸಿ ಅನುಭವಿಸಬೇಕಿದೆ.

ಏರ್‌ಪೋರ್ಟ್‌ ರಸ್ತೆಯ ರಾಷ್ಟ್ರೀಯ ಹೆದ್ದಾರಿ 7ರ ದೇವನಹಳ್ಳಿ ಪ್ಲಾಜಾದಲ್ಲಿ ಭಾನುವಾರ ರಾತ್ರಿಯಿಂದಲೇಟೋಲ್‌ ದರ ಹೆಚ್ಚಿಸಲಾಗಿದೆ. ಕಾರೊಂದರ ಒಂದು ಬದಿ ಶುಲ್ಕದಲ್ಲಿ ₹5 ಹಾಗೂ ಹೋಗಿ ಬರುವ ಶುಲ್ಕದಲ್ಲಿ ₹10 ಹೆಚ್ಚಳವಾಗಿದೆ. ಬಸ್‌ಗಳ ಹೋಗಿ ಬರುವ ಶುಲ್ಕದಲ್ಲಿ ₹15 ಹೆಚ್ಚಳವಾಗಿದೆ.

ಕಾರಿನ ಮಾಲೀಕರು ಒಂದು ಬದಿ ಸಂಚಾರಕ್ಕೆ ₹90 ಹಾಗೂ ಹೋಗಿ ಬರಲು ₹135 ಶುಲ್ಕ ಪಾವತಿಸಬೇಕಿದೆ.

ADVERTISEMENT

‘ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (ಎನ್‌ಎಚ್‌ಎಐ) ಅನುಮತಿ ಪಡೆದುಕೊಂಡ ಬಳಿಕವೇ ಈ ದರ ಹೆಚ್ಚಳ ಮಾಡಿದೆ. ಪರಿಷ್ಕೃತ ದರಗಳು 2020ರ ಮಾರ್ಚ್‌ 31ರವರೆಗೂ ಮುಂದುವರೆಯಲಿವೆ’ ಎಂದು ಅಧಿಕಾರಿಗಳು ತಿಳಿಸಿದರು.

ಭಾರಿ ಗಾತ್ರದವಾಹನ ಶುಲ್ಕ ‘ಭಾರಿ’ ಹೆಚ್ಚಳ: ಮಲ್ಟಿ ಎಕ್ಸೆಲ್ ವಾಹನಗಳ ಟೋಲ್‌ ಶುಲ್ಕದಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಏಳು ಎಕ್ಸೆಲ್‌ ವಾಹನದ ಹೋಗಿ ಬರುವ ಸಂಚಾರದ ಶುಲ್ಕ ₹795ರಿಂದ ₹830ಕ್ಕೆ ಹೆಚ್ಚಳವಾಗಿದೆ.

ಟೋಲ್‌ ಹೆಚ್ಚಿಸಿದ ಕುರಿತು ಪ್ರತಿಕ್ರಿಯಿಸಿದ ನಗರ ಸಾರಿಗೆ ಕಾರ್ಯಕರ್ತ ಸಂಜೀವ್‌ ದ್ಯಾಮಣ್ಣನವರ, ‘ಪ್ರಯಾಣಿಕರ ಮೇಲಿನ ಟೋಲ್‌ನ ಹೊರೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಆದಷ್ಟು ಬೇಗ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಸದ್ಯ ವಿಮಾನ ನಿಲ್ದಾಣ ರಸ್ತೆಯನ್ನು ಇನ್ನಷ್ಟು ವಿಸ್ತರಿಸಬೇಕು. ಜನರ ಮೇಲೆ ಟೋಲ್‌ನ ಭಾರವನ್ನು ಹೇರುವ ಬದಲುಸರ್ಕಾರ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಸಾರಿಗೆ ಸೌಲಭ್ಯ ಒದಗಿಸಬೇಕು. ಬೇಗ ಉಪನಗರ ರೈಲು ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.