ADVERTISEMENT

ಅಕ್ರಮ ‘ಟೋಯಿಂಗ್’: ವಾಹನದ ಹಿಂದೆ ಓಡಿದ ಸವಾರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 16:16 IST
Last Updated 28 ಜನವರಿ 2022, 16:16 IST
ಸಂಚಾರ ಪೊಲೀಸರು ಟೋಯಿಂಗ್ ಮಾಡಿದ್ದ ತಮ್ಮ ಬೈಕ್ ಬಿಡಿಸಿಕೊಳ್ಳಲು, ಅದರ ಹಿಂದೆಯೇ ರಸ್ತೆಯಲ್ಲಿ ಓಡಿದ ಸವಾರ
ಸಂಚಾರ ಪೊಲೀಸರು ಟೋಯಿಂಗ್ ಮಾಡಿದ್ದ ತಮ್ಮ ಬೈಕ್ ಬಿಡಿಸಿಕೊಳ್ಳಲು, ಅದರ ಹಿಂದೆಯೇ ರಸ್ತೆಯಲ್ಲಿ ಓಡಿದ ಸವಾರ   

ಬೆಂಗಳೂರು: ಇಂದಿರಾನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ವಾಹನಗಳ ಟೋಯಿಂಗ್ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಈ ಕುರಿತ ವಿಡಿಯೊವೊಂದನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ.

‘ಇಂದಿರಾನಗರದಲ್ಲಿ ಟೋಯಿಂಗ್ ಹಾವಳಿ ಮಿತಿಮೀರಿದೆ. ಧ್ವನಿವರ್ಧಕದಲ್ಲಿ ಯಾವುದೇ ಸೂಚನೆ ನೀಡದೇ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಅಮಾಯಕರ ಬದುಕು ಮೂರಾಬಟ್ಟೆ ಆಗುತ್ತಿದೆ’ ಎಂದು ವಿಡಿಯೊಗೆ ಶೀರ್ಷಿಕೆ ಬರೆಯಲಾಗಿದೆ.

ವಿಡಿಯೊವನ್ನು ಹಂಚಿಕೊಂಡಿರುವ ಹಲವರು, ‘ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ.

ADVERTISEMENT

’ಟೋಯಿಂಗ್ ಮಾಡುವ ಮುನ್ನ ಧ್ವನಿವರ್ಧಕದಲ್ಲಿ ಕೂಗಬೇಕು. ಸ್ಥಳದಲ್ಲಿ ಮಾಲೀಕರು ಇದ್ದರೂ ವಾಹನ ಬಿಡಬೇಕೆಂದು ಗೃಹ ಸಚಿವರು ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಅವರ ಮಾತಿಗೂ ಪೊಲೀಸರು ಕಿಮ್ಮತ್ತು ನೀಡುತ್ತಿಲ್ಲ. ತಮ್ಮಿಷ್ಟದಂತೆ ಟೋಯಿಂಗ್ ಮಾಡಿ, ಜನರಿಂದ ದಂಡ ವಸೂಲಿ ಮಾಡುತ್ತಿದ್ದಾರೆ‘ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ: ಕೋರಿಯರ್ ನೀಡುವ ವ್ಯಕ್ತಿಯೊಬ್ಬರು, ತಮ್ಮ ಬೈಕ್‌ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಅದರ ಸಮೀಪದಲ್ಲೇ ಅವರು ಕೋರಿಯರ್ ಪೊಟ್ಟಣ ವಿತರಿಸುತ್ತಿದ್ದರು. ‘ಟೈಗರ್’ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದ ಸಂಚಾರ ಪೊಲೀಸರು, ಧ್ವನಿವರ್ಧಕದಲ್ಲಿ ಯಾವುದೇ ಸೂಚನೆ ನೀಡದೇ ಬೈಕ್ ಟೋಯಿಂಗ್ ಮಾಡಿದ್ದರು. ಈ ದೃಶ್ಯ ವಿಡಿಯೊದಲ್ಲಿದೆ.

ಟೋಯಿಂಗ್‌ ಮಾಡುವುದನ್ನು ನೋಡಿದ್ದ ವ್ಯಕ್ತಿ, ಓಡೋಡಿ ಸ್ಥಳಕ್ಕೆ ಬಂದಿದ್ದರು. ಬೈಕ್ ಬಿಡುವಂತೆ ವಿನಂತಿಸಿದ್ದರು. ಸಿಬ್ಬಂದಿ, ಬೈಕ್‌ ಕೆಳಗೆ ಇಳಿಸದೇ ಸ್ಥಳದಿಂದ ಹೊರಟಿದ್ದರು. ಟೈಗರ್‌ ವಾಹನದಲ್ಲಿದ್ದ ತಮ್ಮ ಬೈಕ್ ಹಿಡಿದುಕೊಂಡಿದ್ದ ವ್ಯಕ್ತಿ, ಹಿಂದೆಯೇ ಓಡಿದ್ದರು. ಈ ದೃಶ್ಯವೂ ವಿಡಿಯೊದಲ್ಲಿ ಸೆರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.