ADVERTISEMENT

ಟೊಯೊಟಾ ಕಿರ್ಲೋಸ್ಕರ್: ಕೇಂದ್ರ ಕಾರ್ಮಿಕ ಸಚಿವರ ಭೇಟಿಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 20:51 IST
Last Updated 21 ಡಿಸೆಂಬರ್ 2020, 20:51 IST
   

ರಾಮನಗರ: ದಕ್ಷಿಣ ಭಾರತದ ಇತರ ವಾಹನ ತಯಾರಿಕಾ ಕಂಪನಿಗಳ ಕಾರ್ಮಿಕರ ಜೊತೆಗೂಡಿ ಕೇಂದ್ರ ಕಾರ್ಮಿಕ ಸಚಿವರನ್ನು ಭೇಟಿ ಮಾಡಲು ಬಿಡದಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ (ಟಿಕೆಎಂ) ಕಾರ್ಮಿಕ ಸಂಘ ಮುಂದಾಗಿದೆ.

ಕಾರ್ಮಿಕರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿರುವ ಹಿನ್ನೆಲೆಯಲ್ಲಿ, ದಕ್ಷಿಣ ಭಾರತ ಮಟ್ಟದ ಕಾರು ತಯಾರಿಕಾ ಕಂಪನಿಗಳ ಯೂನಿಯನ್‌ ಫೆಡರೇಶನ್‌ ಮುಖಂಡರ ನೇತೃತ್ವದಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಒಟ್ಟು 17 ಬಹುರಾಷ್ಟ್ರೀಯ ಕಂಪನಿಗಳ ಕಾರ್ಮಿಕ ‍ಪ್ರತಿನಿಧಿಗಳು ಹಾಗೂ ಕಾರ್ಮಿಕ ‍ಪರ ಸಂಘಟನೆಗಳ ಮುಖಂಡರ ಜೊತೆಗೂಡಿ ನಿಯೋಗ ಒಯ್ದು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು. ಟೊಯೊಟಾ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಕೋರಲಾಗುವುದು. ಆದರೆ ಈ ಬಗ್ಗೆ ಇನ್ನಷ್ಟು ಚರ್ಚೆ ಆಗಬೇಕಿದ್ದು, ಭೇಟಿಯ ದಿನಾಂಕ ಅಂತಿಮಗೊಂಡಿಲ್ಲ ಎಂದು ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಚಕ್ಕೆರೆ ಹಾಗೂ ಕಾರ್ಯದರ್ಶಿ ಬಸವರಾಜ ಹವಾಲ್ದಾರ್‌ ತಿಳಿಸಿದರು.

ADVERTISEMENT

‘ಟೊಯೊಟಾ ಕಾರ್ಖಾನೆಯಲ್ಲಿ ಹೊಸತಾಗಿ ತಂದಿರುವ ಕಾರ್ಮಿಕ ಶೋಷಣೆ ಕಾನೂನುಗಳನ್ನೇ ಉಳಿದ ಕಾರ್ಖಾನೆಗಳು ಅನುಸರಿಸಲು ಹೊರಟಿವೆ. ಇದನ್ನು ವಿರೋಧಿಸಿ ಇತರ ಕಾರು ಉತ್ಪಾದನಾ ಕಂಪನಿಗಳ ಕಾರ್ಮಿಕ ಸಂಘಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿವೆ. ಪ್ರಧಾನಿ ನರೇಂದ್ರ ಅವರನ್ನೂ ಭೇಟಿ ಮಾಡಲು ಪ್ರಯತ್ನಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.