ADVERTISEMENT

ಟೊಯೊಟಾ: ಕಾರ್ಮಿಕರ ಬೆಂಬಲಕ್ಕೆ ನಿಂತ ಡಿ.ಕೆ ಸುರೇಶ್‌

ಆಡಳಿತ ಮಂಡಳಿ ಜತೆ ಮುರಿದು ಬಿದ್ದ ಮಾತುಕತೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 21:27 IST
Last Updated 23 ಡಿಸೆಂಬರ್ 2020, 21:27 IST
ರಾಮನಗರ ಟೊಯೊಟಾ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್‌.
ರಾಮನಗರ ಟೊಯೊಟಾ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್‌.   

ಬಿಡದಿ: ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ಸ್ (ಟಿಕೆಎಂ) ಕಂಪನಿಯ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘದ ಪ್ರತಿನಿಧಿಗಳೊಂದಿಗೆ ಸಂಸದ ಡಿ.ಕೆ. ಸುರೇಶ್ ಅವರು ಬುಧವಾರ ಬಿಡದಿಯಲ್ಲಿ ನಡೆಸಿದ ಸಂಧಾನ ಸಭೆ ಯಾವುದೇ ನಿರ್ಣಯಕ್ಕೆ ಬರುವಲ್ಲಿ ವಿಫಲವಾಗಿದೆ. ಇದರ ಬೆನ್ನಲ್ಲೇ ಕಾರ್ಮಿಕರು ನಡೆಸುತ್ತಿರುವ‌ ಹೋರಾಟಕ್ಕೆ ಸಂಸದರು ಬೆಂಬಲ ಸೂಚಿಸಿದ್ದು, ಗಡುವಿನೊಳಗೆ ಸಮಸ್ಯೆ ಬಗೆಹರಿಸುವಂತೆ ತಾಕೀತು‌ ಮಾಡಿದ್ದಾರೆ.

ಸಂಧಾನ ಸಭೆಯ ಮಧ್ಯಸ್ಥಿಕೆ ವಹಿಸಿ ಮಾತನಾಡಿದ ಸುರೇಶ್, ಕಂಪನಿ ಹಾಗೂ ಕಾರ್ಮಿಕರಿಬ್ಬರ ಹಿತದೃಷ್ಟಿಯಿಂದ 66 ಸಿಬ್ಬಂದಿಯ ಅಮಾನತು ಆದೇಶ ಹಿಂಪಡೆಯಬೇಕು. ಮಾತುಕತೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆದರೆ, ಅಮಾನತು ಆದೇಶ ಹಿಂಪಡೆಯಲು ಆಡಳಿತ ಮಂಡಳಿಯ ಪ್ರತಿನಿಧಿಗಳು ಒಪ್ಪಲಿಲ್ಲ ಎನ್ನಲಾಗಿದೆ. ಇದರಿಂದ ಸಂಧಾನ ಮಾತುಕತೆ ಮುರಿದು ಬಿತ್ತು.

ನಂತರ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಂಸದರು, ‘ಸರ್ಕಾರ ಮನಸ್ಸು ಮಾಡಿದರೆ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ, ಆಡಳಿತ ವರ್ಗದ ನಿರ್ಲಕ್ಷ್ಯದಿಂದ‌ ಸಮಸ್ಯೆ ತಲೆದೋರಿದೆ. ಇನ್ನಾದರೂ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಟೊಯೊಟಾ ಹಠಮಾರಿ ಧೋರಣೆ ಬಿಡಬೇಕು: ಕಾರ್ಮಿಕರು ಮುಷ್ಕರಕ್ಕೆ ಕುಳಿತು 50 ದಿನ ಕಳೆದರೂ ಆಡಳಿತ ಮಂಡಳಿ ಹಠಮಾರಿತನ ಧೋರಣೆ ಬಿಟ್ಟಿಲ್ಲ. ಸಂಧಾನ ಮಾತುಕತೆಗೆ ಬಂದಿಲ್ಲ. ಕಾಯಂ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಅವರು ಆರೋಪಿಸಿದರು.

ಆಡಳಿತ ಮಂಡಳಿ ಹಠಮಾರಿ ಧೋರಣೆಯ ಕಾರಣ ತಿಳಿಯುತ್ತಿಲ್ಲ. ಕಾರ್ಮಿಕರಲ್ಲೂಕೆಲವೊಂದು ಸಮಸ್ಯೆ ಇರಬಹುದು. ಎರಡೂ ಕಡೆಯಿಂದ ತಪ್ಪುಗಳು ಸಹಜ. ಕಾರ್ಮಿಕರ ತಪ್ಪನ್ನು ತಿದ್ದಬಹುದು. ಸಮಿತಿಯೊಂದನ್ನು ರಚಿಸಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ಅವರು ಸಲಹೆ ಮಾಡಿದರು.

ನಾಲ್ಕೈದು ಕಾರ್ಮಿಕರು ತಪ್ಪು ಮಾಡಿದ್ದರೆ ಅವರೊಂದಿಗೆ ಮಾತನಾಡದೆ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರುತ್ತಿದೆ. ಕಾರ್ಮಿಕರ ಹಿತರಕ್ಷಣೆ ಮಾಡಬೇಕಾದ ಸರ್ಕಾರವು ಕಾಯ್ದೆಯ ಹಲ್ಲುಗಳನ್ನೇ ಕಿತ್ತು ಹಾಕಿದ್ದು, ಬಂಡವಾಳಶಾಹಿಗಳ ಪರ ನಿಂತಿದೆ. ಕಂಪನಿ ಖಾಯಂ ನೌಕರರನ್ನು ತೆಗೆಯಲು ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

‘ಹೋರಾಟದ ನೇತೃತ್ವ ವಹಿಸುವೆ’
‘ಟೊಯೊಟಾ ಕಂಪನಿಯು ತನ್ನ ಹಠಮಾರಿ ಧೋರಣೆ ಕೈಬಿಟ್ಟು, ಕಾರ್ಮಿಕರ ಅಮಾನತು ಆದೇಶ ಹಿಂಪಡೆಯಬೇಕು. ಇಲ್ಲವಾದಲ್ಲಿ ನಾನೇ ಹೋರಾಟದ ನೇತೃತ್ವ ವಹಿಸುತ್ತೇನೆ’ ಎಂದು ಸಂಸದ ಡಿ.ಕೆ ಸುರೇಶ್‌ ಅವರು ಎಚ್ಚರಿಕೆ ನೀಡಿದ್ದಾರೆ.

ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು,ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ ಕಂಪನಿಯು ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದೆ. ಖುದ್ದು‌ ಭೇಟಿ ಮಾಡಿ ವಿನಂತಿ ಮಾಡಿದರೂ ಕಾರ್ಮಿಕರ ಮನವಿಗೆ ಬೆಲೆ ನೀಡುತ್ತಿಲ್ಲ ಎಂದರು.

**

ಜಪಾನ್ ಮೂಲದ ಕಂಪನಿಗೆ ಇಲ್ಲಿನ ರೈತರು ನೂರಾರು ಎಕರೆ ಜಮೀನು ನೀಡಿದ್ದಾರೆ. ಆದರೆ ಕಂಪನಿಯು ಜಿಲ್ಲೆಯಲ್ಲಿ ಕೇವಲ 478 ಜನರಿಗೆ ಕೆಲಸ ನೀಡಿದೆ. ಕಾರ್ಖಾನೆ ಒಡೆದು ಹಾಳುವ ನೀತಿ ಅನುಸರಿಸುತ್ತಿದೆ. ಪ್ರತಿದಿನ ಕಾರ್ಮಿಕರನ್ನು ಅಮಾನತು ಮಾಡಿ ಅವರಲ್ಲಿನ ಒಗ್ಗಟ್ಟನ್ನು ಮುರಿಯುವ ಕೆಲಸ ಮಾಡಲಾಗುತ್ತಿದೆ.
-ಡಿ.ಕೆ. ಸುರೇಶ್‌, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.