ಬೆಂಗಳೂರು: ನಗರದಲ್ಲಿ ಬೇಕರಿ, ಜ್ಯೂಸ್ ಅಂಗಡಿ, ಕಾಂಡಿಮೆಂಟ್ಸ್ ಅಂಗಡಿ ನಡೆಸುತ್ತಿರುವ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಪಾವತಿಸುವಂತೆ ಸೂಚಿಸಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ಜಾರಿ ಮಾಡಿರುವುದಕ್ಕೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳ ಹೊಟ್ಟೆಯ ಮೇಲೆ ತೆರಿಗೆ ಇಲಾಖೆಯ ಅಧಿಕಾರಿಗಳು ಹೊಡೆದಿದ್ದಾರೆ ಎಂದು ವ್ಯಾಪಾರಿಗಳು ನೋವು ತೋಡಿಕೊಂಡಿದ್ದಾರೆ.
ಬ್ಯಾಂಕ್ ದಾಖಲೆ ಸಹಿತ ನೂರಾರು ಸಣ್ಣ ವ್ಯಾಪಾರಿಗಳು ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೆ ಗುರುವಾರ ಬಂದಿದ್ದರು.
‘ಗ್ರಾಹಕರಿಂದ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಹಣ ಸ್ವೀಕರಿಸಿದ್ದೆವು. ವ್ಯಾಪಾರ ಆರಂಭಿಸಿದ್ದ ದಿನದಿಂದಲೂ ಯಾವುದೇ ತೊಂದರೆ ಆಗಿರಲಿಲ್ಲ. ಇದೀಗ ನೋಟಿಸ್ ನೀಡಲಾಗಿದೆ. ಆನ್‌ಲೈನ್ ಮೂಲಕ ಇದುವರೆಗೂ ವಹಿವಾಟು ನಡೆಸಿರುವುದಕ್ಕೆ ವಾಣಿಜ್ಯ ತೆರಿಗೆ ಕಟ್ಟಬೇಕು ಎಂದು ಇಲಾಖೆ ನೋಟಿಸ್‌ನಲ್ಲಿ ಸೂಚಿಸಿದೆ. ದುಬಾರಿ ತೆರಿಗೆ ವಿಧಿಸಲಾಗಿದೆ’ ಎಂದು ಆಕ್ರೋಶ ಹೊರಹಾಕಿದರು.
‘ದಿಢೀರ್ ನೋಟಿಸ್ ಕೊಟ್ಟಿದ್ದಾರೆ. ₹41 ಲಕ್ಷ ಪಾವತಿಸುವಂತೆ ಉಲ್ಲೇಖಿಸಿದ್ದಾರೆ. ಶೇಕಡ 99ರಷ್ಟು ಆನ್‌ಲೈನ್ ಮೂಲಕವೇ ವಹಿವಾಟು ನಡೆಯುತ್ತಿದೆ. ಈಗ ಅದಕ್ಕೆ ತೆರಿಗೆ ಪಾವತಿಸುವಂತೆ ಸೂಚಿಸಿದ್ದಾರೆ’ ಎಂದು ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.