
ಬೆಂಗಳೂರು: ‘ಮಹಾಭಾರತದಲ್ಲಿ ಶಕುನಿ ಆಡುತ್ತಿದ್ದ ಆಟ ಇದು’. ‘ಅಲ್ಲ, ಅಲ್ಲ. ದ್ರೌಪದಿಯನ್ನು ಧರ್ಮರಾಯ ಪಣಕ್ಕಿಟ್ಟು ಸೋತ ಆಟ. ನೋಡು ಇದು ಡೈಸ್, ಇದನ್ನು ಹಾಕಿ ಆಟವಾಡಬೇಕು’. ‘ಅಯ್ಯೋ ಅದು ಡೈಸ್ ಅಲ್ಲ. ದಾಳ. ಇದು ಪಗಡೆ’.
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ), ನಮ್ಮ ನೆಲದ ಪಾರಂಪರಿಕ ಆಟಗಳನ್ನು ಆಡುವ ಇಂತಹ ಅವಕಾಶವೊಂದನ್ನು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಭಾನುವಾರ ಕಲ್ಪಿಸಿಕೊಟ್ಟಿತ್ತು. ಬಿಐಸಿಯ ಅಂಗಳದಲ್ಲಿ ಶನಿವಾರ ಮತ್ತು ಭಾನುವಾರ ಆಯೋಜಿಸಿದ್ದ ‘ಕೃಷ್ಣೆಯಿಂದ ಕಾವೇರಿವರೆಗೆ...’ ಕಾರ್ಯಕ್ರಮದಲ್ಲಿ ‘ಕವಡೆ’ ಬಳಗವು ಇಂತಹ ದೇಸಿ ಆಟಗಳ ವೇದಿಕೆಗಳನ್ನು ಸಿದ್ಧಪಡಿಸಿತ್ತು.
ಅಲ್ಲಿ ಹಲವು ಆಟಗಳು ಇದ್ದರೂ, ಹೆಚ್ಚು ಜನರನ್ನು ಆಕರ್ಷಿಸಿದ್ದು ಪಗಡೆ. ನಾಲ್ವರು ವಿದ್ಯಾರ್ಥಿಗಳು ಕೂತು ಪಗಡೆ ಆಡುತ್ತಿದ್ದರೆ, ಅವರ ಗೆಳೆಯರು ಸುತ್ತ ನಿಂತು ಹುರುದುಂಬಿಸುತ್ತಿದ್ದರು. ‘ಅಯ್ಯೋ ದಾಳ ಸರಿಯಾಗಿ ಹಾಕು’, ‘ಆರು ಬೀಳಬೇಕಿತ್ತು, ಆಗ ಅವನ ಕಾಯಿ ಕತಂ ಆಗುತ್ತಿತ್ತು’, ‘ಪಾಂಡವರು, ಕೌರವರೂ ಇಷ್ಟೊತ್ತು ಆಡಿರಲಿಲ್ಲವೇನೋ, ಇವರು ಇನ್ನೂ ಆಡುತ್ತಲೇ ಇದ್ದಾರೆ’ ಎಂಬ ಮಾತುಗಳು ಪಗಡೆ ಅಂಗಳದಿಂದ ಕೇಳುತ್ತಲೇ ಇದ್ದವು.
ಪಕ್ಕದಲ್ಲೇ ಇದ್ದ ಪುಟ್ಟ ಮೇಜಿನ ಮೇಲೆ ಹಾವು–ಏಣಿ ಆಟದ ಮರದ ಬೋರ್ಡ್ ಇರಿಸಲಾಗಿತ್ತು. ಎಲ್ಲೆಡೆ ಅಂಗಡಿಗಳಲ್ಲಿ ಸಿಗುವ, ಮೊಬೈಲ್ ಗೇಮ್‌ಗಳಲ್ಲಿ ಇರುವ ಚೌಕಾಕಾರದ ಬೋರ್ಡ್ ಅದಾಗಿರಲಿಲ್ಲ. ಬದಲಿಗೆ ವೃತ್ತಾಕಾರದಲ್ಲಿ ರೂಪಿಸಲಾಗಿದ್ದ, ವಿಶಿಷ್ಟ ವಿನ್ಯಾಸದ ಹಾವು–ಏಣಿ ಆಟದ ಬೋರ್ಡ್ ಅದು. ಪಗಡೆ ಆಡಲು ಅವಕಾಶ ಸಿಗದ ಏಳೆಂಟು ಮಕ್ಕಳ ಗುಂಪು ಇಲ್ಲಿ ಸೇರಿ ಹಾವನ್ನು ತಪ್ಪಿಸಿ, ಏಣಿ ಏರಲು ತೊಡಗಿದವು.
ಇವೆರಡೇ ಆಟವೇ ಅಂದುಕೊಂಡರೆ ಅದು ಸುಳ್ಳು. ಪಕ್ಕದಲ್ಲೇ ಇನ್ನೊಂದು ಮೇಜಿನ ಮೇಲೆ ಎಂಟು ಮನೆಗಳ ಚೌಕಾಬಾರ. ಅಲ್ಲೂ ವಿದ್ಯಾರ್ಥಿಗಳ ಗುಂಪು. ಕವಡೆಗಳನ್ನು ಕುಲುಕಿ ಹಾಕಿದಾಗ ಬಂದ ಅಂಕಿಗಳ ಆಧಾರದಲ್ಲಿ ಮಕ್ಕಳು ಕಾಯಿ ನಡೆಸುತ್ತಿದ್ದರೆ, ಮೇಳಕ್ಕೆ ಬಂದಿದ್ದ ವಿದೇಶಿಯರು ಕುತೂಹಲಕ್ಕೆ ಸಾಕ್ಷಿಯಾಗಿದ್ದರು. ಅಲ್ಲೂ ಅಷ್ಟೆ, ‘ಚೌಕ ಬೀಳಬೇಕಿತ್ತು’, ‘ಒಂದು ಬೀಳುತ್ತಲೇ ಇಲ್ಲ. ಅದೊಂದು ಬಿದ್ದರೆ, ನನ್ನ ಎಲ್ಲ ಕಾಯಿಗಳೂ ಹಣ್ಣಾಗುತ್ತವೆ’ ಎಂಬ ಮಾತುಗಳು ಆಟಕ್ಕೆ ಮೆರುಗು ನೀಡಿದ್ದವು.
ಇನ್ನು ಅಳಗುಳಿ ಮಣೆ ಆಟದಲ್ಲಿ ಮಧ್ಯವಯಸ್ಸಿನ ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ಪೈಪೋಟಿಗೆ ಇಳಿದಿದ್ದರು. ಸಂಜೆ ಮೇಳಕ್ಕೆ ತೆರೆ ಬೀಳುವವರೆಗೂ ದಾಳ, ಕವಡೆ, ಡೈಸು ಉರುಳುತ್ತಲೇ ಇದ್ದವು.
ಚಾಟ್ ಜಿಪಿಟಿ ಮತ್ತು ಸಹಜ ಬೆಳಕು
ವನ್ಯಜೀವಿ ಛಾಯಾಗ್ರಾಹಕ ಅರುಣ್ ಕುಮಾರ್ ಕೃಷ್ಣಯ್ಯ ಅವರ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು. ಕುತೂಹಲದಿಂದ ಚಿತ್ರಗಳನ್ನು ನೋಡುತ್ತಿದ್ದ ಪುಟಾಣಿಯೊಬ್ಬ ‘ಅಂಕಲ್ ಆ ಬರ್ಡ್‌ನ ಹಿಂದೆ ಲೈಟ್ ಇದೆಯಲ್ಲಾ ಅದನ್ನು ಚಾಟ್ ಜಿಪಿಟಿಯಲ್ಲಿ ಮಾಡಿದ್ದಾ’ ಎಂದು ಪ್ರಶ್ನಿಸಿದ. ಹುಡುಗ ಬೊಟ್ಟುಮಾಡಿ ತೋರಿಸಿದ್ದ ಸ್ಪೂನ್‌ಬಿಲ್ ಟೇಕಾಫ್‌ನ ಚಿತ್ರವನ್ನು ಅರುಣ್ ಅವರು ವಿವರಿಸುತ್ತಾ ‘ಇಲ್ಲ ಪುಟ್ಟ. ಅದು ಆ ಪಕ್ಷಿಯ ರೆಕ್ಕೆಯ ಹಿಂದೆ ಬೆಳಕು ಸಹಜವಾಗಿ ಬರುವಂತೆ ತೆಗೆದ ಫೋಟೊ’ ಎಂದರು. ಪುಟಾಣಿಯ ಜತೆಗಿದ್ದ ಹಿರಿಯರು ಕುತೂಹಲ ತೋರಿದಾಗ ‘ವರ್ಷದ ಎಲ್ಲ ಕಾಲದಲ್ಲೂ ಅಂತಹ ಬೆಳಕು ಸಿಗುವುದಿಲ್ಲ. ಡಿಸೆಂಬರ್‌ನಲ್ಲಿ ಮಾತ್ರ ಈ ರೀತಿಯ ಬೆಳಕು ಇರುತ್ತದೆ. ಆದರೆ ಮೋಡ ಇರುವುದರಿಂದ ಸಾಮಾನ್ಯವಾಗಿ ಇಂತಹ ಫೋಟೊ ತೆಗೆಯಲಾಗುವುದಿಲ್ಲ’ ಎಂದು ವಿವರಿಸಿದರು. ನೆರಳು–ಬೆಳಕನ್ನು ವಿಶಿಷ್ಟವಾಗಿ ಸಂಯೋಜಿಸಿ ವನ್ಯಜೀವಿಗಳ ಚಿತ್ರಗಳನ್ನು ತೆಗೆಯುವ ಸಾಹಸ ಹಾಗೂ ಸವಾಲುಗಳ ಬಗ್ಗೆ ನೋಡುಗರು ಮತ್ತು ಛಾಯಾಗ್ರಾಹಕರ ಮಧ್ಯೆ ಚರ್ಚೆ ನಡೆಯುತ್ತಲೇ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.