ADVERTISEMENT

₹100ಕ್ಕೆ ಟ್ರಾಫಿಕ್ ನಿಯಮ ಗಾಳಿಗೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 19:45 IST
Last Updated 20 ಆಗಸ್ಟ್ 2019, 19:45 IST
   

ನಗರದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಿಯಮ ಉಲ್ಲಂಘನೆಗೆ ಕಾಯ್ದೆ, ಕಾನೂನು ಇದ್ದರೂ ನಿಯಮ ಪಾಲಿಸುವಲ್ಲಿ ವಾಹನ ಸವಾರರರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಾಗಾಗಿ ದುಬಾರಿ ದಂಡ ವಿಧಿಸುವ ನಿಯಮವನ್ನು ತರಲಾಯಿತಾದರೂ ಯಾವುದೇ ಸುಧಾರಣೆ ಕಾಣುತ್ತಿಲ್ಲ.

ರಸ್ತೆ ಸುರಕ್ಷತೆ ಸೇರಿದಂತೆ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಮೋಟಾರು ವಾಹನ (ತಿದ್ದುಪಡಿ)ಮಸೂದೆ ಕೂಡ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಇಷ್ಟೆಲ್ಲ ಇದ್ದರೂ ನಿಯಮಗಳು ಇನ್ನೂ ಗಾಳಿಯಲ್ಲಿ ತೇಲಾಡುತ್ತಿವೆ. ಇದಕ್ಕೆ ಟ್ರಾಫಿಕ್ ಪೊಲೀಸರ ನಿರೀಕ್ಷೆಯೂ ಒಂದು ಕಾರಣ ಎನ್ನುವುದು ವಾಹನ ಸವಾರರ ಅಭಿಪ್ರಾಯ. ಸಾರ್ವಜನಿಕರೇ ನಿಯಮ ಪಾಲಿಸುತ್ತಿಲ್ಲ ಎನ್ನುತ್ತಾರೆ ಟ್ರಾಫಿಕ್‌ ಪೊಲೀಸರು.

ಚಿಲ್ಲರೆ ಹಣ ಪಡೆಯುವ ಆಸೆಗೆ ನಿಯಮ ಉಲ್ಲಂಘಿಸುತ್ತೀರಲ್ಲವೇ ಎಂದು ಪೊಲೀಸೊಬ್ಬರನ್ನು ಮಾತಿಗೆಳೆದಾಗ ಮೂಕ ಉತ್ತರ ನೀಡಿದ್ದರು. ನಿಯಮದ ಹೆಸರಿನಲ್ಲಿ ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಾರೆಯೇ?ಹೊಸ ನಿಯಮವೂ ಕೂಡಪೊಲೀಸರ ಜೇಬಿಗೆ ಅನುಕೂಲವಾಗಿದೆಯೇ? ಇಂತಹ ಪ್ರಶ್ನೆಗಳ ಸುತ್ತ ಗಿರಕಿ ಹೊಡೆಯುವ ಉತ್ತರಗಳು ಟ್ರಾಫಿಕ್ ಪೊಲೀಸರ ಕಲೆಕ್ಷನ್ ಕಟ್ಟುಗಳ ಒಂದೊಂದು ಚಿತ್ರಣವನ್ನು ಬಿಚ್ಚಿಡುತ್ತವೆ ಎಂಬುದು ಚಾಲಕರ ಅಭಿಪ್ರಾಯ.

ADVERTISEMENT

ಏನಿದು ನಿರೀಕ್ಷೆ?

ಟ್ರಾಫಿಕ್ ನಿಯಮ ಪಾಲಿಸದೆ, ಉಲ್ಲಂಘನೆ ಮಾಡಿ ಟ್ರಾಫಿಕ್ ಪೊಲೀಸರ ಕೈಗೆ ಸಿಲುಕಿದಾಗ ಮಾತಿನ ಒಪ್ಪಂದ ನಡೆಯುತ್ತದೆ. ಅದು ಕೂಡ ವಿವಿಧ ಆಯಾಮದ ರೂಪದಲ್ಲಿ. ‘ಒಬ್ಬ ಪೊಲೀಸ್ ಇದ್ದರೆ ಒಂದು ರೀತಿಯಾದರೆ ಇಬ್ಬರಿದ್ದಾಗ ಮತ್ತೊಂದು ರೀತಿಯ ನಿಯಮದಲ್ಲಿ ವಸೂಲಿ ನಡೆಯುತ್ತದೆ. ಕೊಟ್ಟರೆ ನಾವು ಬಚಾವ್ ಆಗುತ್ತೇವೆ. ದಂಡ ಕಟ್ಟಬೇಕು ಎಂದೇನು ಇಲ್ಲ. ಸ್ವಲ್ಪ ಅವರ ಕೈಗಿಟ್ಟರೆ ಸಾಕು. ಅವರು ಬಯಸುವುದು ಕೂಡ ಅದನ್ನೇ. ನಮ್ಮಲ್ಲಿ ಎಲ್ಲಾ ದಾಖಲೆಗಳು ಇದ್ದರೂ ಸುಮ್ಮನೆ ಪಕ್ಕಕ್ಕೆ ನಿಲ್ಲಿಸಿ ಹಳೆಯ ಕೇಸು ಹಾಗೆ ಹೀಗೆ ಎಂದು ಸಮಯ ವ್ಯರ್ಥ ಮಾಡುತ್ತಾರೆ. ಸುಮ್ಮನೆ ನಿಲ್ಲಿಸಿದರೆ ಒಂದಷ್ಟು ಕೊಟ್ಟು ಹೋಗುತ್ತಾರೆ ಎಂಬುದು ಅವರ ಲೆಕ್ಕಚಾರ’ ಎನ್ನುತ್ತಾರೆ ಚಾಲಕರು.

ಚಾಲನ ಪರವಾನಗಿ, ಹೆಲ್ಮೆಟ್, ವಾಹನದ ದಾಖಲೆಗಳು ಏನೊಂದೂ ಇಲ್ಲ. ಆದರೂ ಟ್ರಾಫಿಕ್ ಪೊಲೀಸರ ಕೈಯಿಂದ ಸಲೀಸಾಗಿ ತಪ್ಪಿಸಿಕೊಂಡು ಬರುತ್ತಾರೆ. ಹೇಗೆ ಎಂಬ ಪ್ರಶ್ನೆಗೆ ವ್ಯಂಗ್ಯವಾಗಿಯೇ ಉತ್ತರಿಸುತ್ತಾನೆ ಬೈಕ್ ಚಾಲಕನೊಬ್ಬ. ‘ನೂರು ನಿಯಮಗಳು ಹೇಳಿದರೂ ಕೊನೆಗೆ ಬಂದು ನಿಲ್ಲುವುದು ನೂರು ರೂಪಾಯಿಗೆ ಮಾತ್ರ. ಒಂದಿಷ್ಟು ಕೊಟ್ಟರೆ ಬಿಟ್ಟು ಬಿಡುತ್ತಾರೆ ಎನ್ನುವ ನಂಬಿಕೆ ನಮಗಿದೆ ಹಾಗಾಗಿ ಧೈರ್ಯದಿಂದ ಓಡಾಡುತ್ತೇವೆ. ಹಾಗಂತ ಎಲ್ಲರೂ ಹಾಗೆ ಮಾಡುತ್ತಾರೆ ಎಂದು ಹೇಳೊಕೆ ಆಗಲ್ಲ. ಕೆಲ ಪೊಲೀಸರು ನಾವು ಎಷ್ಟೇ ಪಟ್ಟು ಹಿಡಿದರೂ ನಿಯಮ ಮುರಿಯುವುದಿಲ್ಲ. ಅಂತಹವರಕೈಗೆ ಸಿಕ್ಕು ನಿಯಮ ಕಡ್ಡಾಯವಾಗಿ ಪಾಲಿಸುವ ಹಂತಕ್ಕೆ ಬಂದಿದ್ದೇವೆ. ಎಲ್ಲರೂ ಹೀಗೆ ಕಟ್ಟುನಿಟ್ಟಾಗಿ ನಿಯಮ ಯಾಕೆ ಪಾಲಿಸುವುದಿಲ್ಲ? ಹಾಗೆ ಶಿಸ್ತಿನಿಂದ ಪಾಲಿಸಿದ್ದರೆ ಇಂದು ಹೊಸ ನಿಯಮದ ಮಸೂದೆ ಅಗತ್ಯವೇ ಇರುತ್ತಿರಲಿಲ್ಲ ಎನ್ನುತ್ತಾರೆ ವಾಹನ ಚಾಲಕರೊಬ್ಬರು.

ಹಣವಿಲ್ಲ ಅಂದ್ರೆ ಪೊರಕೆ ಕೊಡು

ಟ್ರಾಫಿಕ್ ಪೊಲೀಸರ ನಿರೀಕ್ಷೆ ಯಾವ ಮಟ್ಟಕ್ಕಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಬೈಕ್ ಮೇಲೆ ಗೃಹ ಉಪಯೋಗದ ವಸ್ತುಗಳನ್ನು ಹಾಕಿಕೊಂಡು ಸಾಗುವಾಗ ಟ್ರಾಫಿಕ್ ಪೊಲೀಸ್ ವ್ಯಕ್ತಿಯೊಬ್ಬರಬೈಕ್ ನಿಲ್ಲಿಸಿ ದಂಡ ಕಟ್ಟಲು ಹೇಳಿದ. ‘ಸರ್ ನನ್ನ ಬಳಿ ಹಣವಿಲ್ಲ ಸ್ಟೇಷನ್‌ಗೆ ಬಂದು ಗಾಡಿ ತೆಗೆದುಕೊಂಡು ಹೋಗುತ್ತೇನೆ ಎಂದಾಗ’, ‘ಎರಡು ಪೊರಕೆ ಕೊಟ್ಟು ಹೋಗು ಸುಮ್ಮನೆ ರಿಸ್ಕ್‌ ಯಾಕೆ’ ಎಂದು ಟ್ರಾಫಿಕ್ ಪೊಲೀಸ್ ಹೇಳಿದ್ದ. ಈ ದೃಶ್ಯವನ್ನು ಕಂಡ ಸಾರ್ವಜನಿಕರು ಪೊಲೀಸರನ್ನು ತರಾಟೆಗೆ ಕೂಡ ತೆಗೆದುಕೊಂಡಿದ್ದರು. ‘ಅವನ ಮೇಲೆ ಕೇಸ್‌ ಹಾಕಬೇಕು ಪಾಪ ಎಂದು ಬಿಟ್ಟಿದ್ದೇನೆ. ನಿಯಮದ ಪ್ರಕಾರ ಹೋದರೆ ಹೆಚ್ಚು ಹಣ ಕಟ್ಟಬೇಕು. ನಮ್ಮ ಠಾಣೆಯಲ್ಲಿ ಪೊರಕೆ ಇಲ್ಲ ಹಾಗಾಗಿ ತೆಗೆದುಕೊಂಡಿದ್ದು’ ಎಂದು ಆ ಪೊಲೀಸ್‌ ಕಾರಣ ನೀಡಿದ್ದರು. ಪೊಲೀಸ್‌ ಮಾತಿಗೆ ಸಾರ್ವಜನಿಕರು ಮಾತಿನಲ್ಲೇ ತಿವಿದಿದ್ದರು.

ಕಟ್ಟುನಿಟ್ಟಾಗಿ ನಿಯಮ ಪಾಲಿಸುವಲ್ಲಿ ಎಡವಿದ್ದು, ₹ 100, 200 ಕ್ಕೆ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಟ್ರಾಫಿಕ್ ಪೊಲೀಸರು ನಿಯಮ ಬದ್ಧವಾಗಿ ಕಾರ್ಯ ನಿರ್ವಹಿಸಿದರೆ ದುಬಾರಿ ದಂಡದ ನಿಯಮಗಳ ಅವಶ್ಯಕತೆ ಇರುತ್ತಿರಲಿಲ್ಲ. ಇದಕ್ಕೆ ವಾಹನ ಚಾಲಕರದ್ದು ಕೂಡ ತಪ್ಪಿದ್ದರೂ ಸುಲಭವಾಗಿ ತಪ್ಪಿಸಿಕೊಳ್ಳುವ ಮಾರ್ಗಕ್ಕೆ ಪುಷ್ಟಿ ನೀಡಿದ್ದು ಪೊಲೀಸರೇ. ನಿಯಮದ ಪ್ರಕಾರ ದಂಡ ಕಟ್ಟಿಸಿಕೊಂಡವರೂ ಇದ್ದಾರೆ. ಅಂತಹ ಪೊಲೀಸರು ಇರುವುದರಿಂದ ಆ ಭಯದಿಂದಲಾದರು ನಿಯಮ ಪಾಲಿಸುತ್ತೇವೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಹೀಗಂತಾರೆ ಟ್ರಾಫಿಕ್ ಪೊಲೀಸ್

‘ಈ ಬಗ್ಗೆ ನಮ್ಮನ್ನು ಕೇಳಿದರೆ ಹೇಗೆ? ನೀವು ಈ ಪ್ರಶ್ನೆಗಳನ್ನು ಸ್ಟೇಷನ್‌ಗೆ ಹೋಗಿ ಕೇಳಬೇಕು. ನಮಗೆ ಈ ಬಗ್ಗೆ ಗೊತ್ತಿಲ್ಲ. ಏನು ಹೇಳುವುದು’ ಎಂದು ಮತ್ತೆ ಮರು ಪ್ರಶ್ನೆ ಕೇಳುತ್ತಾರೆ. ತಪ್ಪಿತಸ್ಥರಂತೆ ವರ್ತಿಸುತ್ತ ಏನೂ ತಿಳಿಯದವರಂತೆಯೂ ನಸುನಗುತ್ತಾರೆ! ‘ನಮ್ಮ ಹೆಸರು ಹಾಕಿ ಬರಿಬೇಡಿ’ ಎಂದು ಮನವಿಯನ್ನೂ ಮಾಡುತ್ತಾರೆ. ‘ಇದರಲ್ಲಿ ನಮ್ಮದೇನೂ ಇಲ್ಲ. ಆಡಿಸುವಾತ ಅಲ್ಲಿದ್ದಾನೆ ಕೇಳಿ’ ಎಂದು ಠಾಣೆಯ ಕಡೆ ಕೈ ತೋರಿಸುತ್ತಾರೆ. ಪೊಲೀಸರ ಈ ನಡುವಳಿಕೆ ಅವರು ಯಾವ ರೀತಿ ಕರ್ತವ್ಯ ನಿಭಾಯಿಸುತ್ತಾರೆ ಎನ್ನುವುದನ್ನು ಸೂಚಿಸುತ್ತದೆ.

₹ 100 ತೆಗೆದುಕೊಂಡು ಕಾರ್‌ ಚಾಲಕನನ್ನು ಬಿಟ್ಟು ಕಳುಹಿಸುವ ಪೊಲೀಸ್‌ನನ್ನು ಕೇಳಿದರೆ, ‘ಇಂಥವರು ದಿನಕ್ಕೆ ಸಾವಿರ ಜನ ಬರುತ್ತಾರೆ. ಏನು ಮಾಡೋದು? ದಂಡ ಕಟ್ಟಿ ಎಂದರೆ ದುಡ್ಡಿಲ್ಲ ಅಂತಾರೆ. ಬಿಟ್ಟು ಕಳುಹಿಸುತ್ತೇವೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಟ್ರಾಫಿಕ್‌ ಪೊಲೀಸ್‌ ಒಬ್ಬರು. ಇಂತಹ ಸಮಸ್ಯೆಗಳ ಬಗ್ಗೆ ಪೊಲೀಸ್ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿ ಕ್ರಮ ಜರುಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.