ADVERTISEMENT

ರಸ್ತೆ ಸುರಕ್ಷತೆ ಬಗ್ಗೆ ಶಿಕ್ಷಕರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 18:35 IST
Last Updated 17 ಏಪ್ರಿಲ್ 2019, 18:35 IST

ಬೆಂಗಳೂರು: ಸಂಚಾರ ಮತ್ತು ರಸ್ತೆ ಸುರಕ್ಷತೆ ಬಗ್ಗೆಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದರ ಜೊತೆಗೆ ಅದನ್ನು ಶಿಸ್ತಾಗಿ ಪಾಲಿಸುವಂತೆ ಮಾಡುವುದು ಇನ್ನು ಮುಂದೆ ಶಿಕ್ಷಕರಿಗೆ ಕಡ್ಡಾಯವಾಗಲಿದೆ.

ತರಗತಿಗಳಲ್ಲಿ ಪ್ರತಿನಿತ್ಯ ಪಾಠ– ಪ್ರವಚನದ ಜತೆಗೆ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಚಾರಗಳನ್ನು ಹೇಳಿಕೊಡಬೇಕು. ಅದಕ್ಕೂ ಮೊದಲು ಶಿಕ್ಷಕರು ಆ ಕುರಿತ ಮಾಹಿತಿಯನ್ನು ಕರಗತ ಮಾಡಿಕೊಳ್ಳಬೇಕಾಗಿದೆ.

ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ರಸ್ತೆ ಸುರಕ್ಷತೆ ಮಾಹಿತಿಗಳನ್ನು ಒಳಗೊಂಡ ಪುಸ್ತಿಕೆಗಳನ್ನು ಶಿಕ್ಷಕರಿಗೆ ಒದಗಿಸಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಜಂಟಿಯಾಗಿ ಈ ಪ್ರಯತ್ನಕ್ಕೆ ಕೈ ಹಾಕಿವೆ.

ADVERTISEMENT

ಪ್ರತಿ ವರ್ಷ ವಿಶ್ವದಾದ್ಯಂತ 12 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸುಮಾರು 5 ಕೋಟಿ ಜನ ಗಾಯಗೊಳ್ಳುತ್ತಿದ್ದಾರೆ ಎಂದು ಇಲಾಖೆ ಮೂಲಗಳು ಹೇಳಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ‘ಪ್ರಜಾವಾಣಿ’ ಜತೆ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುವುದು ನಮ್ಮ ಉದ್ದೇಶ. ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವ ಜ್ಞಾನವು ಸೀಮಿತವಾದುದು. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ರಸ್ತೆ ಸುರಕ್ಷತೆ ಕಲಿಸುವುದು ಅಗತ್ಯ. ವಾಹನ ಚಲಾಯಿಸುವ ಚಾಲಕರು ಮಾತ್ರವಲ್ಲ, ಪಾದಚಾರಿಗಳು ಮತ್ತು ಪ್ರಯಾಣಿಕರಿಗೂ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಅಗತ್ಯ ಎಂದರು.

ಶಿಕ್ಷಣ ಇಲಾಖೆಯ ‘ಗುರುಚೇತನ’ ಕಾರ್ಯಕ್ರಮದಡಿ ಶಿಕ್ಷಕರಿಗೆ ಸಂಚಾರ ಮತ್ತು ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ಅರಿವು ಮೂಡಿಸಲು ತರಬೇತಿ ನೀಡಲಾಗುವುದು. ಈ ಕ್ಷೇತ್ರದಲ್ಲಿರುವ ತಜ್ಞರು ಕೈಪಿಡಿ ತಯಾರಿಸಲು ಸಹಕಾರ ನೀಡಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮುಖ್ಯವಾಗಿ, ರಸ್ತೆ ಸಿಗ್ನಲ್‌ಗಳು ಮತ್ತು ಅವುಗಳ ಪಾತ್ರ, ಸಂಚಾರಿ ನಿಯಮಗಳ ಪಾಲನೆ, ಅಪಘಾತ ನಡೆದಾಗ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಮತ್ತು ರಸ್ತೆ ಸುರಕ್ಷತೆ ಕುರಿತ ಸಂಶೋಧನೆ ಕುರಿತ ವಿಷಯಗಳನ್ನು ಸೇರಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.