ADVERTISEMENT

ಸಂಚಾರ ದಟ್ಟಣೆ | ಬುಧವಾರ ವರ್ಕ್‌ ಫ್ರಂ ಹೋಂ: ನಿರ್ಧಾರ ಕೈಗೊಳ್ಳದ ಐ.ಟಿ ಕಂಪನಿಗಳು

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 16:30 IST
Last Updated 28 ಜುಲೈ 2025, 16:30 IST
   

ಬೆಂಗಳೂರು: ಹೊರವರ್ತುಲ ರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಐ.ಟಿ ಕಂಪನಿಗಳ ನೌಕರರಿಗೆ ಪ್ರತಿ ಬುಧವಾರ ವರ್ಕ್‌ ಫ್ರಂ ಹೋಂಗೆ ಅವಕಾಶ ಹಾಗೂ ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡಲು ಸಂಚಾರ ಪೊಲೀಸರು ಮತ್ತು ಬಿಎಂಟಿಸಿ ನೀಡಿರುವ ಸಲಹೆ ಬಗ್ಗೆ ಐ.ಟಿ ಕಂಪನಿಗಳು ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಟೆಕ್ ಕಾರಿಡಾರ್‌ನಲ್ಲಿ ದಟ್ಟಣೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮನ್ವಯ ಸಭೆಯಲ್ಲಿ ಈ ಪ್ರಸ್ತಾವ ಚರ್ಚೆಗೆ ಬಂದಿತ್ತು.

ಬಿಬಿಎಂಪಿ ವಲಯ ಆಯುಕ್ತರು, ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು, ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಕಾರ್ತಿಕ್ ರೆಡ್ಡಿ, ಗ್ರೇಟರ್‌ ಬೆಂಗಳೂರು ಐಟಿ ಆ್ಯಂಡ್‌ ಕಂಪನೀಸ್‌ ಅಸೋಸಿಯೇಷನ್ (ಜಿಬಿಐಸಿಎ) ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಐ.ಟಿ ಕಂಪನಿಗಳಿಗೆ ಕೆಲವು ಸಲಹೆ ನೀಡಿದ್ದ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಕಾರ್ತಿಕ್ ರೆಡ್ಡಿ, ‘ಐ.ಟಿ ಕಂಪನಿಗಳು ಅತಿ ಹೆಚ್ಚು ಇರುವ ಸಿಲ್ಕ್‌ಬೋರ್ಡ್-ಕೆ.ಆರ್‌.ಪುರಂ ವರೆಗಿನ ರಸ್ತೆಯಲ್ಲಿ ಗಂಟೆಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಹೊರವರ್ತುಲ ರಸ್ತೆಯಲ್ಲಿ ಬೆಳಿಗ್ಗೆ 9 ರಿಂದ 10ರ ದಟ್ಟಣೆ ಅವಧಿಯಲ್ಲಿ ವಾಹನ ಸಂಚಾರ ಹೆಚ್ಚಿರುತ್ತದೆ. ಆದ್ದರಿಂದ ಕೆಲಸದ ಅವಧಿಯನ್ನು ಬೆಳಿಗ್ಗೆ 7.30 ರಿಂದಲೇ ನಿಗದಿಪಡಿಸಬೇಕು. ವಾರದ ಮಧ್ಯದ ಅವಧಿಯಲ್ಲಿ ದಟ್ಟಣೆ ಹೆಚ್ಚಿರುವುದರಿಂದ ಬುಧವಾರ ವರ್ಕ್ ಫ್ರಂ ಹೋಂಗೆ ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದ್ದರು.

ಟೆಕ್ ಪಾರ್ಕ್‌ಗಳಿಗೆ ಸಂಪರ್ಕ ಕಲ್ಪಿಸಲು ಪೂರಕವಾಗುವಂತೆ ಎಸಿ ಬಸ್‌ ಸೇವೆ ಒದಗಿಸುವುದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಸಭೆಯ ನಂತರ ನಡೆದ ಬೆಳವಣಿಗೆ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಜಿಬಿಐಸಿಎ ಉಪಾಧ್ಯಕ್ಷ ಗಿರೀಶ್, ‘ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲೇಬೇಕು. ಕೇವಲ ಬುಧವಾರ ವರ್ಕ್‌ ಫ್ರಂ  ಹೋಂ ಮಾಡಿದರೆ ಉಳಿದ ದಿನಗಳಲ್ಲಿ ಸಂಚಾರ ಸಮಸ್ಯೆ ಇರುವುದಿಲ್ಲವೇ? ಇದಕ್ಕೆ ಎಲ್ಲಾ ಕಂಪನಿಗಳು ಒಪ್ಪಿಕೊಳ್ಳುವುದು ಕಷ್ಟ. ಕೆಲಸದ ಅವಧಿಯನ್ನು ಬೆಳಿಗ್ಗೆ 8 ರಿಂದ 4 ಹಾಗೂ 11ರಿಂದ 7ರವರೆಗೆ ನಿಗದಿ ಮಾಡಬಹುದು.

ಕಂಪನಿಗಳು ಪೇ ಆ್ಯಂಡ್‌ ಪಾರ್ಕಿಂಗ್ ಜಾರಿಗೊಳಿಸಿದರೆ ಉದ್ಯೋಗಿಗಳು ಕಾರು ತರುವುದನ್ನು ನಿಲ್ಲಿಸಿ, ಸಾರ್ವಜನಿಕ ಸಾರಿಗೆ ಸೇವೆ ಬಳಸುತ್ತಾರೆ. ಪರ್ಯಾಯವಾಗಿ ಕ್ಯಾಬ್ ವ್ಯವಸ್ಥೆ ಮಾಡಬಹುದು. ಕೆಲವು ಕಂಪನಿಗಳು ಈಗಾಗಲೇ ಪೇ ಆ್ಯಂಡ್ ಪಾರ್ಕಿಂಗ್ ಜಾರಿಗೊಳಿಸಿವೆ. ಕಾರ್‌ ಪೂಲಿಂಗ್ ಅನ್ನು ಪ್ರೋತ್ಸಾಹಿಸಬೇಕು. ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ಹೇಳಿದರು.

‘ಬೆಳ್ಳಂದೂರು, ಎಚ್‌ಎಸ್‌ಆರ್‌ ಸಿಲ್ಕ್ ಬೋರ್ಡ್, ಮಾರತ್ತಹಳ್ಳಿ, ಕಾಡುಬೀಸನಹಳ್ಳಿಯಲ್ಲಿ ವಿಪರೀತ ದಟ್ಟಣೆ ಇದೆ. ಮೆಟ್ರೊ ಯೋಜನೆಗಳು ಪೂರ್ಣಗೊಂಡರೆ ಸಂಚಾರ ದಟ್ಟಣೆ ಕಡಿಮೆ ಆಗಬಹುದು. ಹಲವು ಕಡೆ ರಸ್ತೆಗಳನ್ನು ಅಗೆದು ಬಿಡಲಾಗಿದೆ. ಬಸ್‌, ಟ್ರಕ್‌ನಂತಹ ಭಾರಿ ವಾಹನಗಳು ಕೆಟ್ಟು ನಿಂತರೆ ತಕ್ಷಣ ತೆರವಿಗೆ ಕ್ರಮ ಕೈಗೊಳ್ಳಬೇಕು. ದಟ್ಟಣೆ ಅವಧಿಯಲ್ಲಿ ಭಾರಿ ವಾಹನಗಳ ಪ್ರವೇಶಕ್ಕೆ ಕಡ್ಡಾಯವಾಗಿ ನಿರ್ಬಂಧ ಹೇರುವ ನಿಯಮವನ್ನು ಸಮರ್ಪವಾಗಿ ಅನುಷ್ಠಾನಗೊಳಿಸಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.