ADVERTISEMENT

ಬೆಂಗಳೂರು: 270 ಬಾರಿ ಸಂಚಾರ ನಿಯಮ ಉಲ್ಲಂಘನೆ! ₹ 1.36 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 16:27 IST
Last Updated 7 ಏಪ್ರಿಲ್ 2024, 16:27 IST
ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ್ದ ಮಹಿಳೆ
ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ್ದ ಮಹಿಳೆ   

ಬೆಂಗಳೂರು: ಸಂಚಾರ ನಿಯಮಗಳನ್ನು 270 ಬಾರಿ ಉಲ್ಲಂಘಿಸಿದ್ದ ದ್ವಿಚಕ್ರ ವಾಹನವೊಂದರ ಮೇಲೆ ₹1.36 ಲಕ್ಷ ದಂಡ ವಿಧಿಸಲಾಗಿದ್ದು, ಅದನ್ನು ವಸೂಲಿ ಮಾಡಲು ಪೊಲೀಸರು ವಾಹನದ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

‘ಕೆಎ 03 ಜೆಇ 5705’ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಸುತ್ತಾಡಿದ್ದ ಮಹಿಳೆ ಹಾಗೂ ಇತರರು, 270 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಫೋಟೊ ಸಮೇತ ಉಲ್ಲಂಘನೆಗಳನ್ನು ಸೆರೆಹಿಡಿದಿರುವ ಪೊಲೀಸರು, ದಂಡ ಪರಿಶೀಲನೆ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

‘ಬಾಣಸವಾಡಿಯ ಸುಬ್ಬಯ್ಯನಪಾಳ್ಯ, ಕಾಕ್ಸ್‌ಟೌನ್ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಓಡಾಡಿತ್ತು. ಮಹಿಳೆ ಹಾಗೂ ಇತರರು ಹಲವು ಬಾರಿ ಹೆಲ್ಮೆಟ್ ಧರಿಸಿರಲಿಲ್ಲ. ಹಿಂಬದಿ ಸವಾರರೂ ಹೆಲ್ಮೆಟ್ ಹಾಕಿರಲಿಲ್ಲ. ನಿರ್ಬಂಧಿತ ರಸ್ತೆಯಲ್ಲಿಯೂ ವಾಹನ ಸಂಚರಿಸಿತ್ತು’ ಎಂದು ಸಂಚಾರ ಪೊಲೀಸರು ಹೇಳಿದರು.

ADVERTISEMENT

‘₹ 50 ಸಾವಿರಕ್ಕಿಂತ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿರುವ ವ್ಯಕ್ತಿಗಳ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ‘ಕೆಎ 03 ಜೆಇ 5705’ ನೋಂದಣಿ ಸಂಖ್ಯೆ ವಾಹನದ ಮಾಲೀಕರು ಇದ್ದಾರೆ. ಅವರ ಮನೆಗೆ ಹೋಗಿ ದಂಡ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ನಿರ್ದಿಷ್ಟ ದಿನದೊಳಗೆ ದಂಡ ಪಾವತಿ ಮಾಡಬೇಕು. ಇಲ್ಲದಿದ್ದರೆ, ವಾಹನ ಜಪ್ತಿ ಮಾಡಲಾಗುವುದು. ಇದಾದ ನಂತರವೂ ದಂಡ ಪಾವತಿಸದಿದ್ದರೆ, ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.