ಬೆಂಗಳೂರು: ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಕ್ಕಾಗಿ ಉಪ್ಪಾರಪೇಟೆ ಸಂಚಾರ ಪೊಲೀಸರು ನಗರದಲ್ಲಿ ಭಾನುವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಗುಬ್ಬಿ ವೀರಣ್ಣ ಕಂಪನಿಯ ರಂಗಭೂಮಿ ಕಲಾವಿದ ನಾಗೇಂದ್ರ ಯಮರಾಜನ ವೇಷ ಧರಿಸಿದರೆ, ರಂಗಪ್ಪ ಅವರು ಚಿತ್ರಗುಪ್ತನ ವೇಷ ಧರಿಸಿ ಗಮನ ಸೆಳೆದರು. ಕೈಯಲ್ಲೊಂದು ಗದೆ ಹಿಡಿದು ಓಡಾಡಿ ಸವಾರರಿಗೆ ಸಂಚಾರ ನಿಯಮಗಳ ಅರಿವು ಮೂಡಿಸಿದರು.
ವಾಹನಗಳನ್ನು ತಡೆದು ನಿಲ್ಲಿಸಿದ್ದ ಯಮ ಮತ್ತು ಚಿತ್ರಗುಪ್ತ ವೇಷಧಾರಿ, ಪ್ರತಿಯೊಬ್ಬರಿಗೂ ಗುಲಾಬಿ ಹೂವು ನೀಡಿ ನಿಯಮ ಪಾಲಿಸುವಂತೆ ಮನವಿ ಮಾಡಿದರು. ಹೆಲ್ಮೆಟ್ ಧರಿಸದ ಹಾಗೂ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬೈಕ್ ಓಡಿಸುತ್ತಿದ್ದ ಸವಾರರನ್ನು ಬೆನ್ನಟ್ಟಿ ಹಿಡಿದರು. ರಸ್ತೆಯಲ್ಲೇ ಅವರಿಗೆ ಸಂಚಾರ ನಿಯಮಗಳ ಪಾಠ ಮಾಡಿದರು. ‘ತಲೆ ಹುಷಾರು... ಇಲ್ಲದಿದ್ದರೆ ನನ್ನ ಲೋಕಕ್ಕೆ ಬರುತ್ತಿಯಾ’ ಎಂದು ಹಾಸ್ಯವಾಗಿ ಹೇಳಿ ಗುಲಾಬಿ ಹೂವು ಕೊಟ್ಟು ಬೀಳ್ಕೊಟ್ಟರು.
ಕಲಾವಿದ ನಾಗೇಂದ್ರ, ‘ಪ್ರತಿಯೊಬ್ಬರ ಜೀವವೂ ಅಮೂಲ್ಯವಾದದ್ದು. ಮನೆಯಿಂದ ಹೊರಗೆ ಬಂದ ಸವಾರರು, ವಾಪಸ್ ಹೋಗುವವರೆಗೂ ಕುಟುಂಬದವರು ಕಾಯುತ್ತಿರುತ್ತಾರೆ. ಸಂಚಾರ ನಿಯಮಗಳನ್ನು ಪಾಲಿಸಿದರೆ ಎಲ್ಲರ ಜೀವನ ಸುಖಕರವಾಗಿರುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.