ADVERTISEMENT

ಚಾಲಕನ ಮೇಲೆ ಹಲ್ಲೆ ನಡೆಸಿದ ಹೆಡ್‌ ಕಾನ್‌ಸ್ಟೆಬಲ್‌: ವಿಡಿಯೊ ವೈರಲ್

ಅವಾಚ್ಯ ಶಬ್ದಗಳಿಂದ ನಿಂದನೆ; ತನಿಖೆ ನಡೆಸಲು ಎಸಿಪಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 5:28 IST
Last Updated 21 ಸೆಪ್ಟೆಂಬರ್ 2019, 5:28 IST
ಚಾಲಕನ ಮೇಲೆ ಹಲ್ಲೆ ಮಾಡಿದ ಹೆಡ್‌ ಕಾನ್‌ಸ್ಟೆಬಲ್ ಮಹಾಸ್ವಾಮಿ
ಚಾಲಕನ ಮೇಲೆ ಹಲ್ಲೆ ಮಾಡಿದ ಹೆಡ್‌ ಕಾನ್‌ಸ್ಟೆಬಲ್ ಮಹಾಸ್ವಾಮಿ   

ಬೆಂಗಳೂರು: ತಪಾಸಣೆ ನೆಪದಲ್ಲಿ ಟ್ರಕ್‌ ತಡೆದಿದ್ದ ಹೆಡ್‌ ಕಾನ್‌ಸ್ಟೆಬಲೊಬ್ಬರು ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್ ಆಗಿದೆ.

ನಗರದ ಪುರಭವನ ಎದುರು ನಡೆದಿರುವ ಘಟನೆಯನ್ನು ಟ್ರಕ್‌ ಚಾಲಕನೇ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ‘ಪೊಲೀಸ್ ಜೊತೆ ಅನುಚಿತವಾಗಿ ವರ್ತಿಸಿದರೆ ದಂಡ ಹಾಕುತ್ತೀರಾ. ಪೊಲೀಸರೇ ನನ್ನ ಜೊತೆ ಅನುಚಿತವಾಗಿ ವರ್ತಿಸಿ ಹಲ್ಲೆ ಮಾಡಿದ್ದಾರೆ. ಇದಕ್ಕೆ ಏನು ಹೇಳುತ್ತೀರಾ’ ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ವಿಡಿಯೊಗೆ ಪ್ರತಿಕ್ರಿಯಿಸಿರುವ ಹಲವು ಸಾರ್ವಜನಿಕರು, ‘ಹೆಡ್‌ ಕಾನ್‌ಸ್ಟೆಬಲ್ ದುಂಡಾವರ್ತನೆ ತೋರಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಪೂರ್ವ ಸಂಚಾರ ವಿಭಾಗದ ಡಿಸಿಪಿ ಜಗದೀಶ್, ‘ವಿಡಿಯೊ ನೋಡಿದ್ದೇನೆ. ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿ ಅವರಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಆಗಿದ್ದೇನು?: ಹಲಸೂರು ಗೇಟ್ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ಮಹಾಸ್ವಾಮಿ ಅವರು ಪುರಭವನ ಸಿಗ್ನಲ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಅವರ ಜೊತೆ ಕಾನ್‌ಸ್ಟೆಬಲೊಬ್ಬರು ಇದ್ದರು. ಸ್ಥಳಕ್ಕೆ ಬಂದಿದ್ದ ಟ್ರಕ್‌ ಚಾಲಕನನ್ನು ತಡೆದಿದ್ದರು. ಎಲ್ಲವೂ ಸರಿ ಇದ್ದಿದ್ದರಿಂದ ಸ್ಥಳದಿಂದ ಹೋಗುವುದಾಗಿ ಚಾಲಕ ಹೇಳಿದ್ದ.

ಅದಕ್ಕೆ ಒಪ್ಪದ ಮಹಾಸ್ವಾಮಿ, ಟ್ರಕ್‌ನ ಮುಂದಿನ ಸೀಟಿನಲ್ಲಿ ಹತ್ತಿ ಕುಳಿತಿದ್ದರು. ಠಾಣೆಗೆ ಹೋಗುವಂತೆ ಚಾಲಕನಿಗೆ ಹೇಳಿದ್ದರು. ಚಾಲಕ ಠಾಣೆಯತ್ತ ಟ್ರಕ್ ಚಲಾಯಿಸಿದ್ದ.

ದಾರಿ ಮಧ್ಯೆಯೇ ರಸ್ತೆ ಪಕ್ಕದಲ್ಲಿ ಟ್ರಕ್ ನಿಲ್ಲಿಸುವಂತೆ ಮಹಾಸ್ವಾಮಿ ಹೇಳಿದ್ದರು. ಅದಕ್ಕೆ ಒಪ್ಪದ ಚಾಲಕ, ‘ನಾನು ಏನು ತಪ್ಪು ಮಾಡಿಲ್ಲ’ ಎಂದಿದ್ದ. ಅವಾಗಲೇ ಸೀಟಿನಲ್ಲಿ ಎದ್ದು ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಮಹಾಸ್ವಾಮಿ, ಚಾಲಕನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದರು.

ಈ ಎಲ್ಲ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.