ADVERTISEMENT

ಖಾಲಿ ಜಾಗ ಇನ್ನು ಪಾರ್ಕಿಂಗ್‌ ತಾಣ?

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 19:45 IST
Last Updated 1 ಜುಲೈ 2019, 19:45 IST
ಕಬ್ಬನ್‌ ಪಾರ್ಕ್‌ನಲ್ಲಿ ಪಾರ್ಕ್‌ ಮಾಡಲಾದ ವಾಹನಗಳು  –ಪ್ರಜಾವಾಣಿ ಚಿತ್ರ 
ಕಬ್ಬನ್‌ ಪಾರ್ಕ್‌ನಲ್ಲಿ ಪಾರ್ಕ್‌ ಮಾಡಲಾದ ವಾಹನಗಳು  –ಪ್ರಜಾವಾಣಿ ಚಿತ್ರ    

ಕಾಡುವ ಪಾರ್ಕಿಂಗ್‌ ಸಮಸ್ಯೆಗೆ ಬೆಂಗಳೂರು ಮಹಾನಗರ ಸಂಚಾರ ಪೊಲೀಸ್‌ ಇಲಾಖೆ ತಾತ್ಕಾಲಿಕ ಪರಿಹಾರವೊಂದನ್ನು ಕಂಡುಕೊಳ್ಳಲು ಮುಂದಾಗಿದೆ.ನಗರದ ಜನದಟ್ಟನೆ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ಜಾಗವಿಲ್ಲದೆ ಪರದಾಡುತ್ತಿದ್ದ ವಾಹನ ಮಾಲೀಕರಿಗೆ ಇದೊಂದು ನೆಮ್ಮದಿ ನೀಡುವ ಸಿಹಿ ಸುದ್ದಿ!

ನಗರದಲ್ಲಿ ಖಾಲಿ ಇರುವ ಸರ್ಕಾರಿ ಜಾಗಗಳನ್ನು ವಾಹನಗಳ ಪಾರ್ಕಿಂಗ್‌ ಜಾಗಕ್ಕೆ ಬಿಟ್ಟು ಕೊಡುವಂತೆಸಂಚಾರ ಪೊಲೀಸ್‌ ಇಲಾಖೆಯು ರಾಜ್ಯ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಮನವಿ ಮಾಡಿಕೊಂಡಿದೆ.

ವಾಣಿಜ್ಯ ಪ್ರದೇಶ ಮತ್ತು ಸಂಚಾರ ದಟ್ಟನೆ ರಸ್ತೆಗಳ ಬದಿಯಲ್ಲಿ ಖಾಲಿ ಇರುವ ಜಾಗವನ್ನು ವಾಹನಗಳ ಪಾರ್ಕಿಂಗ್‌ಗೆ ಬಿಟ್ಟು ಕೊಡುವಂತೆ ಕೋರಿ ಸಂಚಾರ ವಿಭಾಗದ ಕಮಿಷನರ್‌ ಪಿ.ಹರಿಶೇಖರನ್‌ ಪತ್ರ ಬರೆದಿದ್ದಾರೆ.

ADVERTISEMENT

ನಗರದಲ್ಲಿ ಪಾರ್ಕಿಂಗ್‌ಗೆ ಸೂಕ್ತವಾದ ಖಾಲಿ ಜಾಗಗಳ ಪಟ್ಟಿ ನೀಡುವಂತೆ ನಗರಾಭಿವೃದ್ಧಿ ಸಚಿವಾಲಯವು ಸಂಚಾರ ಪೊಲೀಸ್‌ ಇಲಾಖೆಗೆ ಸೂಚಿಸಿದೆ. ಸಂಚಾರ ಪೊಲೀಸ್‌ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಪಟ್ಟಿ ಸಿದ್ಧವಾದ ನಂತರ ಬಿಬಿಎಂಪಿಗೆ ಕಳಿಸಿಕೊಡಲಾಗುವುದು. ಈ ಕುರಿತು ಬಿಬಿಎಂಪಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.

ಬಿಗಡಾಯಿಸಿರುವ ನಗರದ ಪಾರ್ಕಿಂಗ್‌ ಸಮಸ್ಯೆ ಕುರಿತು ‘ಮೆಟ್ರೊ’ ಜತೆ ಮಾತನಾಡಿದ ಸಂಚಾರ ವಿಭಾಗದ ಕಮಿಷನರ್‌ ಪಿ. ಹರಿಶೇಖರನ್‌, ‘ಸಾರ್ವಜನಿಕರ ವಾಹನ ನಿಲುಗಡೆಗೆ ಖಾಲಿ ಜಾಗ ನೀಡುವಂತೆ ಸರ್ಕಾರ ಮತ್ತು ಬಿಬಿಎಂಪಿಗೆ ಮನವಿ ಮಾಡಿರುವುದು ನಿಜ. ಕೊಡುವುದು ಅಥವಾ ಬಿಡುವುದು ಬಿಬಿಎಂಪಿ ವಿವೇಚನೆಗೆ ಬಿಟ್ಟದ್ದು. ಒಂದು ವೇಳೆ ಜಾಗ ಕೊಟ್ಟರೆ ಬೆಂಗಳೂರಿನ ಪಾರ್ಕಿಂಗ್‌ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಂತೂ ದೊರೆಯಲಿದೆ’ ಎಂದರು.

ಮಂತ್ರಿಮಾಲ್‌ ಎದುರು ಅನಧಿಕೃತವಾಗಿ ಪಾರ್ಕ್‌ ಮಾಡಿರುವ ವಾಹನಗಳು –ಪ್ರಜಾವಾಣಿ ಚಿತ್ರ

ಭವಿಷ್ಯದಲ್ಲಿ ಬೆಂಗಳೂರನ್ನು ಕಾಡಲಿದೆ ಪಾರ್ಕಿಂಗ್‌ ಸಮಸ್ಯೆ

ದಕ್ಷಿಣ ಭಾರತದಲ್ಲಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. 20 ವರ್ಷದ ಹಿಂದೆ 25–26 ಲಕ್ಷದಷ್ಟಿದ್ದ ವಾಹನಗಳ ಸಂಖ್ಯೆ ಈಗ 80.76 ಲಕ್ಷ ದಾಟಿದೆ. ಕೆಲವೇ ದಿನಗಳಲ್ಲಿ ಒಂದು ಕೋಟಿ ತಲುಪಲಿದೆ. ಒಂದು ವೇಳೆ ಪಾರ್ಕಿಂಗ್‌ಗೆ ಅಗತ್ಯ ಜಾಗ ನೀಡದಿದ್ದರೆ ಮುಂಬರುವ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವುದು ಟ್ರಾಫಿಕ್‌ ಪೊಲೀಸ್‌ ಇಲಾಖೆಗೆ ಆತಂಕವಾಗಿದೆ.

ಚೆನ್ನೈ ಮತ್ತು ಮುಂಬೈ ಮಹಾನಗರಗಳಲ್ಲಿ ವಾಹನಗಳ ಸಂಖ್ಯೆ 50 ಲಕ್ಷ ದಾಟಿಲ್ಲ. ಕಳೆದ 20 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 50 ಲಕ್ಷ ದಾಟಿದೆ. ಒಂದು ದಿನಕ್ಕೆ 2–3 ಸಾವಿರ ಹೊಸ ವಾಹನ ನೋಂದಣಿಯಾಗುತ್ತಿವೆ. ಇಷ್ಟು ವಾಹನಗಳಿಗೆ ಪಾರ್ಕಿಂಗ್‌ ಜಾಗ ಎಲ್ಲಿಂದ ಕೊಡಬೇಕು ಎನ್ನುವುದು ಪೊಲೀಸ್‌ ಅಧಿಕಾರಿಗಳ ಪ್ರಶ್ನೆ.

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಮುಂಬೈ ಮತ್ತು ಚೆನ್ನೈ ನಗರಗಳನ್ನು ಮೀರಿ ಬೆಳೆಯುತ್ತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿತ್ಯ 35–50 ಸಾವಿರ ವಾಹನ ಓಡಾಡುತ್ತಿವೆ. ಎರಡನೇ ಟರ್ಮಿನಲ್‌ ಕಾರ್ಯಾರಂಭ ಮಾಡಿದರೆ ಈ ರಸ್ತೆಯಲ್ಲಿ ಪ್ರತಿ ದಿನ ಓಡಾಡುವ ವಾಹನಗಳ ಸಂಖ್ಯೆ ಒಂದು ಲಕ್ಷದ ಗಡಿ ತಲುಪುವ ನಿರೀಕ್ಷೆ ಇದೆ. ಇದು ಇಲಾಖೆಯ ಚಿಂತೆಗೆ ಕಾರಣವಾಗಿದೆ.

ವಾಹನಗಳಿಂದ ತುಂಬಿ ತುಳುಕುತ್ತಿರುವ ರಸ್ತೆಗಳು

ವಾಣಿಜ್ಯ ಪ್ರದೇಶಗಳಲ್ಲಿ ವಾಹನ ಪಾರ್ಕಿಂಗ್‌ಗೆ ಜಾಗವಿಲ್ಲ. ಇದರಿಂದ ಸಮೀಪದ ವಸತಿ ಪ್ರದೇಶಗಳ ಕಿರಿದಾದ ರಸ್ತೆಗಳ ಇಕ್ಕೆಲಗಳು ವಾಹನಗಳೇ ತುಂಬಿರುತ್ತವೆ. ಓಡಾಡಲೂ ಕಷ್ಟವಾಗುತ್ತಿದೆ. ಈ ಬಗ್ಗೆ ಮಹಿಳೆಯರಿಂದ ದೂರುಗಳು ಹೆಚ್ಚುತ್ತಿವೆ. ವಸತಿ ಪ್ರದೇಶಗಳ ನಿವಾಸಿಗಳು ತಮ್ಮ ವಾಹನಗಳನ್ನು ಮುಖ್ಯ ರಸ್ತೆಯಲ್ಲಿ ನಿಲ್ಲಿಸುತ್ತಿದ್ದಾರೆ. ಇದು ಟ್ರಾಫಿಕ್‌ ಸಮಸ್ಯೆಗೆ ಕಾರಣವಾಗುತ್ತಿದೆ. ಇದು ಒಂದು ಬಡಾವಣೆಯ ಸಮಸ್ಯೆ ಅಲ್ಲ. ಇಡೀ ಬೆಂಗಳೂರಿನ ಸಮಸ್ಯೆ.

ಎಲೆಕ್ಟ್ರಾನಿಕ್‌ ಸಿಟಿ, ಕೆ.ಆರ್‌. ಪುರ, ಮಹಾದೇವಪುರ, ವೈಟ್‌ಫೀಲ್ಡ್‌, ಎಂ.ಜಿ. ರಸ್ತೆ, ಬೈಯಪ್ಪನಹಳ್ಳಿ, ಹೊಸೂರು ರಸ್ತೆ, ಇಂದಿರಾನಗರ, ತುಮಕೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆಗಳು ಈಗಾಗಲೇ ವಾಹನಗಳಿಂದ ತುಂಬಿ ತುಳುಕುತ್ತಿವೆ. ಮುಂದೊಂದು ದಿನ ಬೆಂಗಳೂರಿನ ಪ್ರತಿಯೊಂದು ರಸ್ತೆಗಳು ವಾಹನಮಯವಾಗಲಿವೆ. ಪಾರ್ಕಿಂಗ್‌ ಸಮಸ್ಯೆಯ ಲಕ್ಷಣಗಳು ಈಗ ಗೋಚರಿಸ ತೊಡಗಿವೆ. ಈಗಲೇ ಎಚ್ಚೆತ್ತುಕೊಂಡು ಪರಿಹಾರ ಕಂಡು ಹಿಡಿಯದಿದ್ದರೆ ಮುಂದೊಂದು ದಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ಹರಿಶೇಖರನ್‌ ಎಚ್ಚರಿಸುತ್ತಾರೆ.

ಉದ್ಯಾನಗಳು ಪಾರ್ಕಿಂಗ್‌ ತಾಣಗಳಾಗುತ್ತಿವೆ. ಫುಟ್‌ಪಾತ್‌ನಲ್ಲಿ ಬೈಕ್‌ಗಳು ಓಡುತ್ತವೆ. ಮೆಟ್ರೊ ಮತ್ತು ರಸ್ತೆ ಕಾಮಗಾರಿ ನಡೆಯುತ್ತಿರುವುದು ಇದಕ್ಕೆ ಕಾರಣ. ಇದಕ್ಕೆಲ್ಲ ವಾಹನ ಸವಾರರನ್ನೇ ದೂಷಿಸುವುದು ಸರಿಯಲ್ಲ. ಅವರಿಗೆ ಪಾರ್ಕಿಂಗ್‌ ಜಾಗ ಕೊಡದಿದ್ದರೆ ಹೇಗೆ. ಜನರು ತಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎಂದು ಕೇಳುತ್ತಾರೆ.

* ಸರ್ಕಾರ ಮತ್ತು ಬಿಬಿಎಂಪಿ ಜಂಟಿಯಾಗಿ ಟ್ರಾಫಿಕ್‌ ಸಮಸ್ಯೆ ಬಗ್ಗೆ ನೀತಿ ರೂಪಿಸಬೇಕು. ಸಂಚಾರ ನಿಯಂತ್ರಣ ಮಾಡುವುದಷ್ಟೇ ಟ್ರಾಫಿಕ್‌ ಪೊಲೀಸರ ಕೆಲಸ. ಪಾರ್ಕಿಂಗ್‌ ಜಾಗಗಳನ್ನು ಪೊಲೀಸ್‌ ಇಲಾಖೆ ನೀಡಲು ಸಾಧ್ಯವಿಲ್ಲ.

-ಪಿ. ಹರಿಶೇಖರನ್‌, ಸಂಚಾರ ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.