ADVERTISEMENT

ಟ್ರಾಫಿಕ್‌ ಕಿರಿಕಿರಿ ತಪ್ಪಿಸಿಕೊಂಡೆ...!

ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾಯಮೂರ್ತಿ ಬೆಳ್ಳುಂಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 20:07 IST
Last Updated 2 ಆಗಸ್ಟ್ 2019, 20:07 IST
ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್‌. ಓಕಾ (ಎಡದಿಂದ ಎರಡನೆಯವರು) ನ್ಯಾಯಮೂರ್ತಿ ಎ.ಎಸ್ ಬೆಳ್ಳುಂಕೆ ಅವರನ್ನು ಸನ್ಮಾನಿಸಿದರು
ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್‌. ಓಕಾ (ಎಡದಿಂದ ಎರಡನೆಯವರು) ನ್ಯಾಯಮೂರ್ತಿ ಎ.ಎಸ್ ಬೆಳ್ಳುಂಕೆ ಅವರನ್ನು ಸನ್ಮಾನಿಸಿದರು   

ಬೆಂಗಳೂರು: ‘ಬೆಂಗಳೂರು ಮಹಾನಗರದ ಟ್ರಾಫಿಕ್ ರೇಜಿಗೆಯಿಂದಾಗಿ ನಾನು ನನ್ನ ಬಹುಪಾಲ ಸಮಯವನ್ನು ನ್ಯಾಯಮೂರ್ತಿಯಾಗಿ ಧಾರವಾಡದಲ್ಲೇ ಕಳೆಯ ಬಯಸಿದೆ...’ ಶುಕ್ರವಾರ ನಿವೃತ್ತಿ ಹೊಂದಿದ ಹೈಕೋರ್ಟ್ ನ್ಯಾಯಮೂರ್ತಿ ಅಪ್ಪಾಸಾಹೇಬ ಶಾಂತಪ್ಪ ಬೆಳ್ಳುಂಕೆ ಅವರ ನುಡಿಗಳಿವು.

ರಾಜ್ಯ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘದ ವತಿಯಿಂದ ನೀಡಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಜೆ.ಪಿ ನಗರದ ನನ್ನ ಮನೆಯಿಂದ ಹೈಕೋರ್ಟ್‌ ತಲುಪಲು ಏನಿಲ್ಲವೆಂದರೂ ಒಂದೂವರೆ ಗಂಟೆ ಸಮಯ ಬೇಕಿತ್ತು. ಇಷ್ಟೊಂದು ಸಮಯವನ್ನು ದಾರಿಯಲ್ಲೇ ಕಳೆಯುವುದಾದರೆ ಫೈಲುಗಳನ್ನು ನೋಡುವ ಉತ್ಸಾಹವೇ ಎಲ್ಲಿರುತ್ತದೆ ಎಂದು ಭಾವಿಸಿದ ನಾನು ಸ್ವಂತ ಊರಾದ ಧಾರವಾಡದ ಪೀಠದಲ್ಲೇ ಹೆಚ್ಚಿನ ಸಮಯ ಕೆಲಸ ಮಾಡಲು ಇಚ್ಛಿಸಿದೆ’ ಎಂದರು.

‘ನ್ಯಾಯಾಂಗದಲ್ಲಿ ರಾಜಕೀಯ ಸಿದ್ಧಾಂತಗಳನ್ನು ಸೇರ್ಪಡೆ ಮಾಡುವುದು ತರವಲ್ಲ. ವಕೀಲರು ನ್ಯಾಯಮೂರ್ತಿಗಳ ಔದಾರ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು. ಅದು ಬಿಟ್ಟು ವಿಚಾರಣೆ ಮುಂದೂಡಿಕೆಗೆ 30 ವರ್ಷಗಳ ಹಿಂದೆ ಕೇಳುತ್ತಿದ್ದ ಕಾರಣಗಳನ್ನೇ ಇವತ್ತೂ ಕೇಳುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ADVERTISEMENT

ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌. ಓಕಾ ಮಾತನಾಡಿ, ‘ಬೆಳ್ಳುಂಕೆ ಅವರು ಮುನ್ಸೀಫ್‌ ಹುದ್ದೆಯಿಂದ ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನದವರೆಗೆ ಸುದೀರ್ಘ 31 ವರ್ಷಗಳ ಕಾಲ ನ್ಯಾಯಾಂಗ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವುದು ಅವರ ತಾಳ್ಮೆಗೆ ಕೈಗನ್ನಡಿಯಾಗಿದೆ’ ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿಗಳು, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌, ಪ್ರಧಾನ ಕಾರ್ಯದರ್ಶಿ ಎ.ಎನ್‌.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ, ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಕೆ.ಬಿ.ನಾಯಕ್‌, ಸಹಾಯಕ ಸಾಲಿಸಿಟರ್‌ ಜನರಲ್‌ ಸಿ. ಶಶಿಕಾಂತ್‌ ಮತ್ತು ಹಿರಿ–ಕಿರಿಯ ವಕೀಲರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.