ADVERTISEMENT

ಸಂಚಾರ ನಿಯಮ ಉಲ್ಲಂಘನೆ: 1,408 ಪ್ರಕರಣ ದಾಖಲು, ₹7.38 ಲಕ್ಷ ದಂಡ

ಸಂಚಾರ ಪಶ್ಚಿಮ ವಿಭಾಗದ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:49 IST
Last Updated 3 ಜೂನ್ 2025, 14:49 IST
ವ್ಹೀಲಿ ನಡೆಸುತ್ತಿದ್ದ ಬೈಕ್‌ ಅನ್ನು ಮಾಗಡಿ ರಸ್ತೆ ಸಂಚಾರ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ 
ವ್ಹೀಲಿ ನಡೆಸುತ್ತಿದ್ದ ಬೈಕ್‌ ಅನ್ನು ಮಾಗಡಿ ರಸ್ತೆ ಸಂಚಾರ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ    

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಪಶ್ಚಿಮ ವಿಭಾಗದ ಸಂಚಾರ ಪೊಲೀಸರು, 1,408 ಪ್ರಕರಣ ದಾಖಲಿಸಿಕೊಂಡು ₹7.38 ಲಕ್ಷ ದಂಡ ಸಂಗ್ರಹಿಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಮೂವರು ಸಂಚರಿಸುತ್ತಿದ್ದ 45 ಪ್ರಕರಣಗಳನ್ನು ದಾಖಲಿಸಿಕೊಂಡು, ₹22,500 ದಂಡ ಸಂಗ್ರಹಿಸಿದ್ದಾರೆ. ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದವರ ವಿರುದ್ಧ 114 ಪ್ರಕರಣ ದಾಖಲಿಸಿಕೊಂಡು, ₹58,500 ದಂಡ ಸಂಗ್ರಹ ಮಾಡಿದ್ದಾರೆ. ನಿರ್ಬಂಧಿತ ಮಾರ್ಗದಲ್ಲಿ ಸಂಚರಿಸಿದವರ ವಿರುದ್ಧ 210 ಪ್ರಕರಣ ದಾಖಲಿಸಿಕೊಂಡು ₹1 ಲಕ್ಷ ದಂಡ ಸಂಗ್ರಹ ಮಾಡಿದ್ದಾರೆ. ಇತರೆ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಒಟ್ಟು 1,035 ಪ್ರಕರಣ ದಾಖಲಿಸಿಕೊಂಡು, ₹5.52 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವರ್‌ ತಿಳಿಸಿದರು. 

ಎಲ್ಲ ವಾಹನ ಚಾಲಕರು, ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದೂ ಮಾಹಿತಿ ನೀಡಿದರು.

ADVERTISEMENT

ವ್ಹೀಲಿ ವಿರುದ್ಧದ ಕಾರ್ಯಾಚರಣೆ: ಹಳೇ ಮೈಸೂರು ರಸ್ತೆಯಲ್ಲಿ ವ್ಹೀಲಿ ಮಾಡುತ್ತಿದ್ದ ಜಾನಕಿರಾಮ್‌ (19) ಎಂಬಾತನ ವಿರುದ್ಧ ಮಾಗಡಿ ರಸ್ತೆ ಸಂಚಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಾಗಡಿ ರಸ್ತೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಜಾನಕಿರಾಮ್‌ ವ್ಹೀಲಿ ಮಾಡುತ್ತಿರುವುದು ಕಂಡುಬಂದಿತ್ತು. ಯುವಕನ ವಿರುದ್ಧ ಬಿಎನ್‌ಎಸ್‌ ಕಾಯ್ದೆ ಸೆಕ್ಷನ್‌ 281 ಹಾಗೂ ಮೋಟಾರು ವಾಹನ ಕಾಯ್ದೆ ಸೆಕ್ಷನ್‌ 129 ಹಾಗೂ 189ರ ಅಡಿ ಎಫ್‌ಐಆರ್ ದಾಖಲಿಸಿಕೊಂಡು, ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.