ADVERTISEMENT

ಬೆಂಗಳೂರು| ಸುರಕ್ಷಿತ ಹೆರಿಗೆಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ‘ಸೂಲಗಿತ್ತಿ’ ತರಬೇತಿ

ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಶೀಘ್ರವೇ ಪ್ರತ್ಯೇಕ ಸಂಸ್ಥೆ ಪ್ರಾರಂಭ

ವರುಣ ಹೆಗಡೆ
Published 18 ಫೆಬ್ರುವರಿ 2023, 19:28 IST
Last Updated 18 ಫೆಬ್ರುವರಿ 2023, 19:28 IST
ವಾಣಿವಿಲಾಸ ಆಸ್ಪತ್ರೆ
ವಾಣಿವಿಲಾಸ ಆಸ್ಪತ್ರೆ   

ಬೆಂಗಳೂರು: ಸುರಕ್ಷಿತ ಹೆರಿಗೆ ಹಾಗೂ ತಾಯಂದಿರ ಮರಣ ಪ್ರಮಾಣ ತಗ್ಗಿಸಲು ರಾಷ್ಟ್ರೀಯ ಸೂಲಗಿತ್ತಿ ತರಬೇತಿ ಸಂಸ್ಥೆಯನ್ನು ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗುತ್ತಿದೆ. ‌

ಸಂಸ್ಥೆಯ ಕಾರ್ಯಾರಂಭಕ್ಕೆ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇದೇ ತಿಂಗಳು ಕಾರ್ಯಾರಂಭಿಸುವ ಸಾಧ್ಯತೆಯಿದೆ. ಸರ್ಕಾರಿ ವ್ಯವಸ್ಥೆಯಡಿ ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಸಂಸ್ಥೆ ಕಾರ್ಯಾಚರಣೆ ಮಾಡಲಿದೆ. ಯುನಿಸೆಫ್ ಮತ್ತು ಆಸ್ಟ್ರಿಕಾ ಫೌಂಡೇಷನ್ ಸಹಯೋಗದಲ್ಲಿ ಕಾರ್ಯನಿರ್ವಹಿಸಲಿದ್ದು, ಅಂತರರಾಷ್ಟ್ರೀಯ ಶುಶ್ರೂಷಕಿಯರ ಬೆಂಬಲದೊಂದಿಗೆ ಸೂಲಗಿತ್ತಿ ತರಬೇತಿ ನಡೆಯಲಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ತಾಯಿ ಮತ್ತು ಮಕ್ಕಳ ವಿಭಾಗದ ಮಾದರಿ ನೋಂದಣಿ ವ್ಯವಸ್ಥೆಯ (ಎಸ್‌ಆರ್‌ಎಸ್‌) ವರದಿ ಪ್ರಕಾರ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆಗೆ 69 ತಾಯಂದಿರು ಮರಣ ಹೊಂದುತ್ತಿದ್ದಾರೆ. 2017-19ರ ವರದಿಯ ಪ್ರಕಾರ ಈ ಸಂಖ್ಯೆ 83 ಇತ್ತು. ಈಗ ಆ ಸಂಖ್ಯೆ ತಗ್ಗಿದೆ. ದೇಶದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆಗೆ ಸರಾಸರಿ 97 ತಾಯಂದಿರು ಮೃತಪಡುತ್ತಿದ್ದಾರೆ.

ADVERTISEMENT

ತಾಯಂದಿರ ಮರಣ ಪ್ರಮಾಣ ಕಡಿಮೆ ಹೊಂದಿರುವ ರಾಜ್ಯಗಳಲ್ಲಿ ಕೇರಳ (19), ಮಹಾರಾಷ್ಟ್ರ (33), ತೆಲಂಗಾಣ (43), ಆಂಧ್ರಪ್ರದೇಶ (45) ಹಾಗೂ ತಮಿಳುನಾಡು (54) ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿವೆ. ದಕ್ಷಿಣದ ಐದು ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರ ಮರಣ ವರದಿಯಾಗುತ್ತಿದೆ. ಈ ಸಂಖ್ಯೆಯನ್ನು ತಗ್ಗಿಸಲು ಹಾಗೂ ಶಿಶು ಮರಣ ಪ್ರಮಾಣ ತಡೆಗೆ ಈಗ ಸಂಸ್ಥೆ ಪ್ರಾರಂಭಿಸಲಾಗುತ್ತಿದೆ.

ಕೋವಿಡ್‌ನಿಂದ ವಿಳಂಬ: ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಅನ್ವಯ ಕಳೆದ ವರ್ಷವೇ ಸಂಸ್ಥೆಯನ್ನು ಪ್ರಾರಂಭಿಸಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿತ್ತು. ಕೋವಿಡ್‌ನಿಂದಾಗಿ ಪ್ರಾರಂಭ ಸಾಧ್ಯವಾಗಿರಲಿಲ್ಲ. ಈ ಸಂಸ್ಥೆಯು ನೋಡಲ್ ಕೇಂದ್ರದ ಮಾದರಿ ಕಾರ್ಯನಿರ್ವಹಿಸಲಿದೆ. ವಿವಿಧ ಜಿಲ್ಲೆಗಳ ಶುಶ್ರೂಷಕರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.

‘ರಾಷ್ಟ್ರೀಯ ಸೂಲಗಿತ್ತಿ ತರಬೇತಿ ಸಂಸ್ಥೆಯಲ್ಲಿ ಶುಶ್ರೂಷಕರಿಗೆ ಸಹಜ ಹೆರಿಗೆ ಮಾಡಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಕಡಿಮೆ ಅಪಾಯ ಇರುವ ಹೆರಿಗೆಗಳನ್ನು ತರಬೇತಿ ಪಡೆದ ಶುಶ್ರೂಷಕರೇ ಮಾಡಿಸಬಹುದು. ಹೆಚ್ಚಿನ ಅಪಾಯ ಇರುವ ಪ್ರಕರಣಗಳಲ್ಲಿ ವೈದ್ಯರು ಹೆರಿಗೆ ಮಾಡಿಸುತ್ತಾರೆ. ತಾಯಿ ಮತ್ತು ನವಜಾತ ಶಿಶುಗಳ ಮರಣ ತಡೆಗೂ ಇದು ಸಹಕಾರಿಯಾಗುತ್ತದೆ’ ಎಂದು ವಾಣಿವಿ‍ಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸಿ. ಸವಿತಾ ತಿಳಿಸಿದರು.

18 ತಿಂಗಳ ತರಬೇತಿ

ಸಹಜ ಹಾಗೂ ಸುರಕ್ಷಿತ ಹೆರಿಗೆ, ತಾಯಿ ಮತ್ತು ನವಜಾತ ಶಿಶುಗಳ ಆರೈಕೆ ಬಗ್ಗೆ ತರಬೇತಿ ಒದಗಿಸಲು ಇಂಗ್ಲೆಂಡ್‌ನಿಂದ ಇಬ್ಬರು ಹಾಗೂ ರಾಜ್ಯದ ಮೂವರು ಅನುಭವಿ ಶುಶ್ರೂಷಕರು ಸಂಸ್ಥೆಗೆ ಬಂದಿದ್ದಾರೆ. ತರಬೇತಿಗೆ ಕೇರಳದಿಂದ 7 ಮಂದಿ ಹಾಗೂ ರಾಜ್ಯದ ವಿವಿಧ ಭಾಗಗಳಿಂದ 20 ಮಂದಿ ಶುಶ್ರೂಷಕರು ಸಂಸ್ಥೆಗೆ ಬಂದಿದ್ದಾರೆ. ಮೊದಲ ಬ್ಯಾಚ್‌ನಲ್ಲಿ 30 ಮಂದಿಗೆ ತರಬೇತಿ ನೀಡಲಾಗುತ್ತದೆ. ಇದು 18 ತಿಂಗಳ ಅವಧಿಯ ಅಂತರರಾಷ್ಟ್ರೀಯ ಮಟ್ಟದ ತರಬೇತಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.