ADVERTISEMENT

ನಿವೇಶನ, ಪಡಿತ ಚೀಟಿ ನೀಡಿ: ಲಿಂಗತ್ವ ಅಲ್ಪಸಂಖ್ಯಾತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 18:02 IST
Last Updated 29 ಜನವರಿ 2026, 18:02 IST
ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಮುಂಗಳಮುಖಿಯರು ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ
ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಮುಂಗಳಮುಖಿಯರು ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ನಿವೇಶನ, ಪಡಿತರ ಚೀಟಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ನೇತೃತ್ವದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ನೂರಾರು ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರು ಶೋಷಣೆಗೆ ಒಳಗಾಗಿ ನಿತ್ಯ ನರಕದ ಬದುಕು ಅನುಭವಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ಸರ್ಕಾರಗಳು ಸರಿಯಾದ ಮೂಲ ಸೌಕರ್ಯ ಕಲ್ಪಿಸಿಕೊಡುತ್ತಿಲ್ಲ. ಸಮಾಜ ಹಾಗೂ ಕುಟುಂಬದಿಂದ ಸಾವಿರಾರು ಮಂಗಳಮುಖಿಯರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಅವರ ಬದುಕಿಗೆ ಆಧಾರವಾಗಿ ಪಡಿತರ ಚೀಟಿ, ಆಧಾರ್‌ಕಾರ್ಡ್‌, ನಿವೇಶನ ಸೇರಿ ಯಾವುದೇ ನಾಗರಿಕ ಸೌಲಭ್ಯಗಳು ದೊರಕಿಲ್ಲ. ಘನತೆಯ ಬದುಕು ನಡೆಸಲು ಸರ್ಕಾರ ಉಚಿತ ನಿವೇಶನ ನೀಡಬೇಕು, ಆಯಕಟ್ಟಿನ ಪ್ರದೇಶಗಳಲ್ಲಿ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡಬೇಕು. ಸರ್ಕಾರಿ ಹಾಗೂ ಅರೆ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಲಿಂಗತ್ವ ಅಲ್ಪಸಂಖ್ಯಾತರ ಕುರಿತ ಕಥೆಯನ್ನು ಹೊಂದಿರುವ ‘ಶಿವಲೀಲಾ’ ಸಿನಿಮಾಗೆ ಚಿತ್ರಮಂದಿರಗಳನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ. ನೈಜ ಕಥೆಯನ್ನು ಆಧರಿಸಿದ ಈ ಚಿತ್ರದ ವೀಕ್ಷಣೆಗೆ ಎಲ್ಲ ಚಿತ್ರಮಂದಿರಗಳಲ್ಲಿ ಅವಕಾಶ ನೀಡಬೇಕು ಹಾಗೂ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ವೀಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಸುತ್ತೋಲೆ ಹೊರಡಿಸಬೇಕು’ ಎಂದು ಕೋರಿದರು.

ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅಸಮಾನತೆ ನಿವಾರಣೆಯಾಗಿಲ್ಲ. ಮಂಗಳಮುಖಿಯರ ಬದುಕು ದುಸ್ತರವಾಗಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಮೂಲಸೌಕರ್ಯದ ಜೊತೆಗೆ ಇತರೆ ಸೌಲಭ್ಯಗಳಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

‘ಲಿಂಗತ್ವ ಅಲ್ಪಸಂಖ್ಯಾತರು ಲೈಂಗಿಕತೆ, ಭಿಕ್ಷಾಟನೆಗೆ ಸೀಮಿತಗೊಳಿಸಿ ಸಮಾಜ ಇಂದಿಗೂ ಅಸಮಾನತೆಯಿಂದ ಕಾಣುತ್ತಿದೆ. ಅನುಕಂಪದ ಬದಲಾಗಿ ಎಲ್ಲ ವಲಯಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಿ, ಕೌಶಲ ತರಬೇತಿ ನೀಡಬೇಕು’ ಎಂದು ಪ್ರತಿಭಟನಕಾರರು ಮನವಿ ಮಾಡಿದರು.  

ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ. ಶಾಸಕರಾದ ಜನಾರ್ದನ ರೆಡ್ಡಿ. ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಬೆಂಬಲ ಸೂಚಿಸಿದರು. ಬೇಡಿಕೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಅಶ್ವಿನಿ ಸಂಪಂಗಿ, ವೈ.ರಾಮಕ್ಕ, ಮಹಿಳಾ ಘಟಕದ ಲಕ್ಷ್ಮಮ್ಮ, ಶಿವಕುಮಾರ್‌ ಮತ್ತಿತರರು ಇದ್ದರು.

‌‘ಮನೆ ನಿರ್ಮಾಣಕ್ಕೆ ₹10 ಲಕ್ಷ ನೀಡಿ ’ 

ರಾಜ್ಯದ ರೈತ ಕುಟುಂಬಗಳು ಕೂಲಿ ಕಾರ್ಮಿಕರು ಅಂಗವಿಕಲರು ಸೇರಿ 1008 ಜೋಡಿಗಳಿಗೆ ವಿವಾಹ ಮಾಡಿಸಲಾಗಿದೆ. ಈ ಕುಟುಂಬಗಳು ಮನೆ ನಿರ್ಮಿಸಿಕೊಳ್ಳಲು ತಲಾ ₹10 ಲಕ್ಷ  ಅನುದಾನ ಮಂಜೂರು ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಸಂಸ್ಥಾಪಕ ಅಧ್ಯಕ್ಷ ಬಿ.ಟಿ.ಚಂದ್ರಶೇಖರ ಭೋವಿ ಆಗ್ರಹಿಸಿದರು.

ಸ್ವಾತಂತ್ರ್ಯದ ಉದ್ಯಾನದಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ‘ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ ವರ್ಷಕ್ಕೆ ಮೂರು ಬೆಳೆ ಬೆಳೆಯಲು ಅವಕಾಶ ಮಾಡಿಕೊಡಬೇಕು. 24 ತಾಸು ಉಚಿತವಾಗಿ ವಿದ್ಯುತ್ ಪೂರೈಸಬೇಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಖರೀದಿ ಕೇಂದ್ರ ತೆರೆದು ರೈತರು ಬೆಳೆದ ಬೆಳೆಗಳನ್ನು ಖರೀದಿಸಬೇಕು’ ಎಂದು ಒತ್ತಾಯಿಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.