ADVERTISEMENT

ಪೂರ್ಣ ವೇತನಕ್ಕೆ ಆಗ್ರಹಿಸಿ ಹೋರಾಟ

ಸಾರಿಗೆ ನಿಗಮಗಳ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 19:01 IST
Last Updated 5 ನವೆಂಬರ್ 2020, 19:01 IST
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ಸದಸ್ಯರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಸ್ವಾತಂತ್ರ ಉದ್ಯಾನದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು -–ಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ಸದಸ್ಯರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಸ್ವಾತಂತ್ರ ಉದ್ಯಾನದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು -–ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್‌ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ನಾಲ್ಕು ನಿಗಮಗಳ ಕಾರ್ಮಿಕ ಒಕ್ಕೂಟಗಳ ಪ್ರಮುಖರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಕೋವಿಡ್‌ನಿಂದ 50ಕ್ಕೂ ಹೆಚ್ಚು ನೌಕರರು ಸಾವಿಗೀಡಾಗಿದ್ದಾರೆ. ಬಹಳಷ್ಟು ನೌಕರರಿಗೆ ಪೂರ್ಣ ವೇತನ ನೀಡುತ್ತಿಲ್ಲ. ಲಾಕ್‌ಡೌನ್‌ ಮುನ್ನ ಮತ್ತು ನಂತರ ಅಧಿಕಾರಿಗಳು ನೌಕರರಿಗೆ ಹಲವು ರೀತಿಯ ದೌರ್ಜನ್ಯ ನೀಡುತ್ತಿದ್ದಾರೆ’ ಎಂದು ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ಆರೋಪಿಸಿದರು.

‘ನೌಕರರಿಗೆ ₹2000, ₹3000 ಮಾತ್ರ ವೇತನ ನೀಡಲಾಗುತ್ತಿದೆ. ಸೋಂಕು ಹರಡುತ್ತಿದ್ದರೂ ಪ್ರಾಣ ಒತ್ತೆ ಇಟ್ಟು ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೂ ವೇತನ ಕಡಿತ, ಕೆಲಸದಿಂದ ತೆಗೆಯುವಂತಹ ಕಾರ್ಯವನ್ನು ಸರ್ಕಾರ ಮಾಡುತ್ತಿದೆ’ ಎಂದು ದೂರಿದರು.

ADVERTISEMENT

‘70 ವರ್ಷಗಳಿಂದ ತೆರಿಗೆ ರೂಪದಲ್ಲಿ ಈ ನಿಗಮಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟಲಾಗಿದೆ. ಈ ಸಂಕಷ್ಟದ ಸಮಯದಲ್ಲಿ ನೌಕರರಿಗೆ ಪೂರ್ಣವೇತನ ನೀಡಬೇಕು. ಕೊರೊನಾದಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ₹30 ಲಕ್ಷ ಪರಿಹಾರ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಒಂದೇ ಪಾಳಿಯಲ್ಲಿ ಸತತ 12 ತಾಸು ಕೆಲಸ ಮಾಡಬೇಕಾಗಿರುವುದರಿಂದ ಮಹಿಳಾ ಸಿಬ್ಬಂದಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಮೊದಲಿನಂತೆ ಬೆಳಿಗ್ಗೆ 6ರಿಂದ 2 ಮತ್ತು 2ರಿಂದ ರಾತ್ರಿ 10ರವರೆಗೆ ಎರಡು ಪಾಳಿ ಮಾಡಬೇಕು. ಬಸ್‌ನಲ್ಲಿ ಪ್ರಯಾಣಿಕರು ನಿಂತು ಪ್ರಯಾಣಿಸಿದ್ದಕ್ಕೆ ಬಹಳಷ್ಟು ನಿರ್ವಾಹಕರನ್ನು ಅಮಾನವೀಯವಾಗಿ ಅಮಾನತು ಮಾಡಲಾಗಿದೆ. ಇದನ್ನು ವಾಪಸ್ ಪಡೆಯಬೇಕು’ ಎಂದು ನೌಕರರು ಆಗ್ರಹಿಸಿದರು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾರ್ಮಿಕ ಒಕ್ಕೂಟಗಳ ಜೊತೆ ಮಾತುಕತೆ ನಡೆಸಿಯೇ ಇಲ್ಲ. ಕೂಡಲೇ ಮಾತುಕತೆಗೆ ಆಹ್ವಾನಿಸಿ, ನಮ್ಮ ಅಹವಾಲುಗಳನ್ನು ಆಲಿಸಬೇಕು’ ಎಂದರು.

ಫೆಡರೇಷನ್ ಅಧ್ಯಕ್ಷ ಎಚ್.ಡಿ. ರೇವಪ್ಪ, ಉಪಾಧ್ಯಕ್ಷ ಡಾ. ಕೆ. ಪ್ರಕಾಶ್, ಜಂಟಿ ಕಾರ್ಯದರ್ಶಿ ಆನಂದ ಇದ್ದರು.

ಇತರೆ ಬೇಡಿಕೆಗಳು

lಕಾರ್ಮಿಕರ ಗಳಿಕೆ ರಜೆಗಳನ್ನು ವಾಪಸ್‌ ಅವರ ಖಾತೆಗೆ ನೀಡಬೇಕು

lಕ್ವಾರಂಟೈನ್ ಆದ ಅವಧಿ ಮತ್ತು ಚಿಕಿತ್ಸೆ ಪಡೆದ ಅವಧಿಯಲ್ಲಿ ವೇತನ ಸಹಿತ ರಜೆ ನೀಡಬೇಕು

lಬಿಎಂಟಿಸಿಯಲ್ಲಿ ಪಾಳಿಯಲ್ಲಿ ಮಾರ್ಗ ಕಾರ್ಯಾಚರಣೆ ನಡೆಸಬೇಕು

lನಿಗಮದಿಂದ ನಿಗಮಕ್ಕೆ ವರ್ಗಾವಣೆ ಮಾಡಬೇಕು

lಸರ್ಕಾರಗಳು ನಿಗಮಗಳಿಗೆ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು

lನಿಗಮಗಳಿಗೆ ನೀಡಬೇಕಾದ ಬಾಕಿ ಹಣವನ್ನು ಸರ್ಕಾರ ಕೂಡಲೇ ನೀಡಬೇಕು

lನಿಗಮದ ಒಡೆತನದಲ್ಲಿಯೇ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.