ಬೆಂಗಳೂರು : ‘ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ಕೈಗಾರಿಕೆಯ ಸ್ಥಾನಮಾನ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಪ್ರವಸೋದ್ಯಮದ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ. ಫಾಹಿಮ್ ತಿಳಿಸಿದರು.
ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಗುರುವಾರ ಆರಂಭವಾದ ಪ್ರವಾಸೋದ್ಯಮದ ಬೃಹತ್ ಕಾರ್ಯಕ್ರಮ ‘ಪ್ರವಾಸ ಮತ್ತು ಪ್ರವಾಸೋದ್ಯಮ ಮೇಳ’(ಟಿಟಿಎಫ್)ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ(ಕೆಐಎಡಿಬಿ) ಜಮೀನುಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಪ್ರವಾಸೋದ್ಯಮ ಏಜೆನ್ಸಿಗಳಿಗೆ ನೀಡಲು ನಿರ್ಧರಿಸಿದೆ. ಇದರಿಂದ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅನುಕೂಲವಾಗುತ್ತದೆ' ಎಂದು ವಿವರಿಸಿದರು.
ಮೂರು ದಿನ ನಡೆಯುವ ಮೇಳದಲ್ಲಿ ನೇಪಾಳ, ಭಾರತ ಪ್ರವಾಸೋದ್ಯಮ ಇಲಾಖೆಗಳು ಪಾಲ್ಗೊಂಡಿವೆ. ಗೋವಾ, ಕರ್ನಾಟಕ, ಮೇಘಾಲಯ, ತೆಲಂಗಾಣ, ಗುಜರಾತ್, ತಮಿಳುನಾಡು, ಜಾರ್ಖಂಡ್ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮಂಡಳಿಗಳು ಭಾಗವಹಿಸಿವೆ. ಹಾಗೆಯೇ, ಪ್ರವಾಸ ಆಯೋಜಿಸುವ ಖಾಸಗಿ ಕಂಪನಿಗಳು, ಹೋಟೆಲ್ ಉದ್ಯಮಗಳು, ವಿಮಾನಯಾನ ಸಂಸ್ಥೆಗಳೂ ಪಾಲ್ಗೊಂಡಿವೆ.
ಈ ಮೇಳವು ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮ ಮಾರುಕಟ್ಟೆಗಿರುವ ಅವಕಾಶವನ್ನು ಪರಿಚಯಿಸಲಿದೆ. ಮಾತ್ರವಲ್ಲ, ಮುಂಬೈ, ದೆಹಲಿ ಮತ್ತು ಗುಜರಾತ್ ನಂತರ ಬೆಂಗಳೂರು ಮತ್ತೊಂದು ಪ್ರವಾಸೋದ್ಯಮ ಹಬ್ ಆಗಿ ಗುರುತಿಸಿಕೊಳ್ಳಲು ನೆರವಾಗುತ್ತಿದೆ.
ಕಾರ್ಯಕ್ರಮದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ.ಕೆ.ವಿ. ರಾಜೇಂದ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.