ADVERTISEMENT

‘ಪ್ರಯಾಣಿಕ ವಾಹನಗಳಿಗೆ ತೆರಿಗೆ ವಿನಾಯಿತಿ ಘೋಷಿಸಿ’

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 16:59 IST
Last Updated 10 ಆಗಸ್ಟ್ 2021, 16:59 IST

ಬೆಂಗಳೂರು: ‘ಸುಮಾರು ಒಂದೂವರೆ ವರ್ಷದಿಂದ ಜನತಾ ಕರ್ಫ್ಯೂ, ಲಾಕ್‌ಡೌನ್‌ ಸೇರಿದಂತೆ ಅನೇಕ ನಿರ್ಬಂಧಗಳನ್ನು ಹೇರುತ್ತಿರುವ ಪರಿಣಾಮ ಪ್ರವಾಸಿ ವಾಹನ ಉದ್ಯಮ ಸಂಕಷ್ಟದಲ್ಲಿ ಸಿಲುಕಿದೆ. ಈ ಉದ್ಯಮದ ಆರ್ಥಿಕ ಸ್ವಾವಲಂಬನೆಗೆ ಸರ್ಕಾರ ನೆರವು ನೀಡಬೇಕು’ ಎಂದು ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘ ಒತ್ತಾಯಿಸಿದೆ.

ಈ ಕುರಿತು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ, ‘ಪ್ರಯಾಣಿಕ ವಾಹನಗಳ ಸಾರಿಗೆ ವ್ಯವಸ್ಥೆ ನಡೆಸುತ್ತಿರುವವರು ಕೋವಿಡ್‌ ಬಿಕ್ಕಟ್ಟಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋಂಕು ಹರಡುವ ಭಯದಿಂದ ಪ್ರವಾಸಕ್ಕೆ ತೆರಳುವವರ ಸಂಖ್ಯೆಯೂ ಕಡಿಮೆಯಾಗಿದೆ’ ಎಂದು ಹೇಳಿದ್ದಾರೆ.

‘ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರವು, ಆಗಸ್ಟ್‌ನಿಂದ ಆರು ತಿಂಗಳ ತೆರಿಗೆ ವಿನಾಯಿತಿಯನ್ನು ಮತ್ತು ಡಿಸೆಂಬರ್ ವರೆಗಿನ ವಾಹನ ತೆರಿಗೆಯಲ್ಲಿ ವಿನಾಯಿತಿಯನ್ನು ಘೋಷಣೆ ಮಾಡಬೇಕು’ ಎಂದು ಅವರು ಕೋರಿದ್ದಾರೆ.

ADVERTISEMENT

‘ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವಾಲಯದ ಆದೇಶದಂತೆ ಎಂಟು ವರ್ಷಗಳ ವಾಹನಗಳಿಗೆ ಹಸಿರು ತೆರಿಗೆ ವಿಧಿಸುವ ಮತ್ತು 15 ವರ್ಷಗಳ ವಾಹನಗಳನ್ನು ಗುಜರಿಗೆ ಹಾಕುವ ಆದೇಶ ಅನುಷ್ಠಾನಗೊಳಿಸುವುದನ್ನು ರಾಜ್ಯ ಸರ್ಕಾರ ಮುಂದೂಡಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.