ADVERTISEMENT

ಕೊರೊನಾ ಸೋಂಕಿತರಿಗೆ ವಿಕ್ಟೋರಿಯಾದಲ್ಲಿ ಚಿಕಿತ್ಸೆ?

ಅಗತ್ಯ ವ್ಯವಸ್ಥೆ ಮಾಡುವುದಾಗಿ ಸಚಿವ ಬಿ.ಶ್ರೀರಾಮುಲು ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 22:49 IST
Last Updated 20 ಮಾರ್ಚ್ 2020, 22:49 IST
ಸಚಿವ ಶ್ರೀರಾಮುಲು
ಸಚಿವ ಶ್ರೀರಾಮುಲು   

ಬೆಂಗಳೂರು: ‘ಕೋವಿಡ್‌ ರೋಗಿಗಳು ಹಾಗೂ ಸೋಂಕು ಶಂಕಿತರಿಗೆ ವಿಕ್ಟೋರಿಯಾ ಆಸ್ಪತ್ರೆಯನ್ನು ಮೀಸಲಿಡುವಂತೆ ಆರೋಗ್ಯ ಕ್ಷೇತ್ರದ ತಜ್ಞರು ಹಾಗೂ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಬಗ್ಗೆ ಕಾರ್ಯಪಡೆಯಲ್ಲಿ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ, ಜಯನಗರದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ನಿರ್ಮಿಸಿ, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಈ ರೀತಿವಿವಿಧ ಆಸ್ಪತ್ರೆಗಳಲ್ಲಿ ಅವರನ್ನು ದಾಖಲಿಸಿಕೊಂಡಲ್ಲಿ ಚಿಕಿತ್ಸೆಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಹಾಗಾಗಿ ಯಾವುದಾದರೂ ಒಂದು ಆಸ್ಪತ್ರೆಯನ್ನು ಮೀಸಲಿಡಬೇಕು ಎಂಬ ಸಲಹೆಗಳು ಬಂದಿವೆ’ ಎಂದು ಹೇಳಿದರು.

‘2 ಸಾವಿರ ಹಾಸಿಗೆಗಳ ಸಾಮರ್ಥ್ಯದ ವಿಕ್ಟೋರಿಯಾ ಆಸ್ಪತ್ರೆಯನ್ನು ಚಿಕಿತ್ಸೆಗೆ ಮೀಸಲಿಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಅಲ್ಲಿ 10 ಸಾವಿರ ಮಂದಿಗೂ ಚಿಕಿತ್ಸೆ ಒದಗಿಸಲು ಸಾಧ್ಯ.ಕೆ.ಸಿ.ಜನರಲ್ ಹಾಗೂ ಜಯನಗರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಲಾ 400 ಹಾಸಿಗೆಗಳು ಲಭ್ಯವಿದೆ. ಕಿಮ್ಸ್‌ ಆಸ್ಪತ್ರೆಯಲ್ಲಿ 1 ಸಾವಿರ ಹಾಸಿಗೆಗಳು ಸಿಗಲಿವೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಚಿಕಿತ್ಸೆ ಮುಂದೂಡಲು ಮನವಿ

ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಅಗತ್ಯವಿಲ್ಲದ ಚಿಕಿತ್ಸೆಗಳನ್ನು ಮುಂದೂಡುವಂತೆರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್‌) ಮನವಿ ಮಾಡಿಕೊಂಡಿದೆ.

ಸಂಸ್ಥೆಯ ನಿರ್ದೇಶಕ ನಿರ್ದೇಶಕ ಡಾ.ಬಿ.ಎನ್‌. ಗಂಗಾಧರ್,‘ವೃದ್ಧರು ಮತ್ತು ಮಕ್ಕಳು ಈ ಸೋಂಕಿನಿಂದ ಹೆಚ್ಚು ಘಾಸಿಗೊಳ್ಳುತ್ತಾರೆ. ಅವರು ಮನೆಯಿಂದ ಹೊರಗಡೆ ಬರುವುದನ್ನು ಕಡಿಮೆ ಮಾಡಬೇಕು. ಗಂಭೀರವಲ್ಲದ ಕಾಯಿಲೆಗಳಿಂದ ಬಳಲುತ್ತಿರುವವರು ಚಿಕಿತ್ಸೆಯನ್ನು ಮುಂದೂಡಬೇಕು’ ಎಂದು ಮನವಿ ಮಾಡಿದ್ದಾರೆ.

ಹೊಸ ಪ್ರಕರಣ ವರದಿಯಾಗಿಲ್ಲ

ಶುಕ್ರವಾರ 55 ಮಂದಿಯ ವೈದ್ಯಕೀಯ ಪರೀಕ್ಷಾ ವರದಿಗಳು ಬಂದಿದ್ದು, ಅವರಲ್ಲಿ ಯಾರಿಗೂ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ. ಆದರೆ, ಸೋಂಕು ಶಂಕೆ ಹಿನ್ನೆಲೆಯಲ್ಲಿ 27 ಮಂದಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ನಿಯಂತ್ರಣಕ್ಕೆ ವಾರ ಕಾಲಾವಕಾಶ

ಕೊರೊನಾ ಸೋಂಕು ನಾಲ್ಕು ಹಂತದಲ್ಲಿ ಹರಡಲಿದೆ. ಸದ್ಯ ಎರಡನೇ ಹಂತದಲ್ಲಿದ್ದು, ವಿದೇಶಗಳಿಂದ ಬಂದ ವ್ಯಕ್ತಿಗಳಿಂದ ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ ಹಾಗೂ ಸಹೋದ್ಯೋಗಿಗಳಿಗೆ ಹರಡುತ್ತಿದೆ. ಮೂರನೇ ಹಂತದಲ್ಲಿ ಸಮುದಾಯದಲ್ಲಿ ಹರಡಲಿದೆ. ಈ ಹಂತ ತಲುಪುವುದನ್ನು ತಡೆಯಲು ಒಂದು ವಾರ ಕಾಲಾವಕಾಶವಿದೆ.

‘ನಾವು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಸಮುದಾಯಕ್ಕೆ ಹರಡುವುದನ್ನು ತಡೆಯುವಲ್ಲಿ ಸಹಕಾರಿಯಾಗಲಿದೆ. ಮುಂದಿನ ಒಂದು ವಾರ ನಿರ್ಣಾಯಕವಾಗಿದೆ. ಹೊಸದಾಗಿ ಪ್ರಕರಣಗಳು ವರದಿಯಾಗದಿದ್ದಲ್ಲಿ ಎರಡನೇ ಹಂತದಲ್ಲಿಯೇ ಇರುತ್ತೇವೆ‌’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಜಿ.ಪ್ರಕಾಶ್ ಕುಮಾರ್ ತಿಳಿಸಿದರು.

ಇಂದಿನಿಂದ ಲಾಲ್‌ಬಾಗ್‌ ಪ್ರವೇಶ ರದ್ದು

ಇದೇ 21ರಿಂದ ಲಾಲ್‌ಬಾಗ್‌ ಉದ್ಯಾನಕ್ಕೆ ವಾಯುವಿಹಾರಿಗಳು ಹಾಗೂ ಸಾರ್ವಜನಿಕರ ‍ಪ್ರವೇಶ ನಿಷೇಧಿಸಲಾಗಿದೆ.

‘ಉದ್ಯಾನಕ್ಕೆ ನಿತ್ಯ 7ರಿಂದ 10 ಸಾವಿರ ಮಂದಿ ಭೇಟಿ ನೀಡುತ್ತಾರೆ. ಹೆಚ್ಚು ಜನ ಸೇರುವ ಜಾಗದಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆಯಿರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಶುಕ್ರವಾರ ರಾತ್ರಿಯಿಂದಲೇ ಉದ್ಯಾನದ ಎಲ್ಲ ಪ್ರವೇಶದ್ವಾರಗಳನ್ನು ಮುಚ್ಚಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ಜಗದೀಶ್‌ ತಿಳಿಸಿದರು. ಕಬ್ಬನ್‌ ಉದ್ಯಾನ ಕೂಡ
ಬಂದ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ

ಶೇ 85 ರಷ್ಟು ಮಂದಿಗೆ ಈ ಸೋಂಕು ಏನು ಮಾಡುವುದಿಲ್ಲ. ಎಲ್ಲರೂ ಪರೀಕ್ಷೆಯನ್ನು ಬಯಸಿದರೆ ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗುತ್ತದೆ ಎಂದು ನಾರಾಯಣ ಹೃದಯಾಲಯದಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದರು.

ಸೋಂಕು ಪ್ರಕರಣ ವರದಿಯಾದ ದೇಶಗಳಿಂದ ಬಂದವರು ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು. ಸೋಂಕು ಹರಡುವಿಕೆ ತಡೆಯಲು ಸಾರ್ವಜನಿಕರ ಸಹಕರಿಸಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮನವಿ ಮಾಡಿದರು.

ಬಸ್ ಸಂಚಾರ ಸಂಪೂರ್ಣ ಬಂದ್ ಸಾಧ್ಯತೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ‘ಜನತಾ ಕರ್ಫ್ಯೂ’ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇದೇ 22ರಂದು ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ.

‘ಅಗತ್ಯವಿದ್ದಲ್ಲಿ ಮಾತ್ರ ಅಂದು ಬೆಳಿಗ್ಗೆಯಿಂದ ರಾತ್ರಿ 9 ಗಂಟೆ ತನಕ ಬಸ್‌ ಸೇವೆ ಒದಗಿಸಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.

‘21ರಂದು ರಾತ್ರಿ ತಂಗುವ ಮಾರ್ಗದ ಬಸ್‌ಗಳನ್ನು ಹತ್ತಿರದ ಘಟಕಗಳಿಗೆ ತೆರಳಲು ಸೂಚಿಸಲಾಗಿದೆ. 22ರ ರಾತ್ರಿ 9 ಗಂಟೆಯ ನಂತರ ರಾತ್ರಿ ಸೇವೆಯ ಬಸ್‌ಗಳಿಗೆ ಮುಂಗಡ ಕಾಯ್ದಿರಿಸಿದಲ್ಲಿ ಮಾತ್ರ ಬಸ್‌ಗಳ ಕಾರ್ಯಾಚರಣೆ ಮಾಡಲಾಗುವುದು. ಜನ ಸಂದಣೆ ಇದ್ದರೂ ಕಾರ್ಯಾಚರಣೆ ಮಾಡಲಾಗುವುದು’ ಎಂದು ತಿಳಿಸಿದೆ.

ಕೋವಿಡ್ –19 ಭೀತಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವ ಕಾರಣ ಶುಕ್ರವಾರವೂ ಕೆಎಸ್‌ಆರ್‌ಟಿಸಿ, 1,385 ಮಾರ್ಗಗಳ ಸಂಚಾರವನ್ನು ರದ್ದು ಮಾಡಿದೆ. ನಿಗಮದ ವರಮಾನದಲ್ಲಿ ಮಾ.1ರಿಂದ ಈವರೆಗೆ ₹10.58 ಖೋತಾ ಆಗಿದೆ. ಒಟ್ಟು 49,216 ಮಂದಿ ಪ್ರಯಾಣ ರದ್ದು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.