ಬೆಂಗಳೂರು: ನಗರದಲ್ಲಿ ಶನಿವಾರ ಬೀಸಿದ ಬಿರುಗಾಳಿಗೆ ವಿವಿಧೆಡೆ ಮರ ಹಾಗೂ ಹಲವು ಕೊಂಬೆಗಳು ಧರೆಗುರುಳಿವೆ.
ರೆಸಿಡೆನ್ಸಿ ರಸ್ತೆಯಲ್ಲಿರುವ ಮೆಹಕ್ ಪರ್ಫ್ಯೂಮ್ಸ್ ಆ್ಯಂಡ್ ಆಕ್ಸೆಸರೀಸ್, ರಾಡೋ ಸರ್ವೀಸ್ ಸೆಂಟರ್‌ನ ನಂ. 101 ನಿವೇಶನದ ಒಳಭಾಗದಲ್ಲಿದ್ದ ಗುಲ್‌ಮೊಹರ್ ಮರವು ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೊರಿಕ್ಷಾ ಮೇಲೆ ಬಿದ್ದಿದೆ.
ಆಟೊ ಚಾಲಕ ದಿವಾಕರ, ಪ್ರಯಾಣಿಕ ಸ್ಟಾಲಿನ್ ಅವರಿಗೆ ಗಾಯಗಳಾಗಿದ್ದು, ರಿಪಬ್ಲಿಕ್ ಆಸ್ಪತ್ರೆಯಲ್ಲಿ ಪಾಲಿಕೆಯ ವತಿಯಿಂದ ಚಿಕಿತ್ಸೆ ಕೊಡಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಕೆಂಪೇಗೌಡ ನಗರದ ಗವಿಪುರ ಎಕ್ಸ್‌ಟೆನ್ಷನ್‌ನಲ್ಲಿರುವ ಸುಂಕೇನಹಳ್ಳಿ ಉದ್ಯಾನದಲ್ಲಿ ಮರದ ಸಣ್ಣ ಕೊಂಬೆಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮುಂಭಾಗದ ಮೇಲೆ ಬಿದ್ದು, ವಾಹನ ಜಖಂಗೊಂಡಿದೆ. ದ್ವಿಚಕ್ರ ವಾಹನದಲ್ಲಿದ್ದ ಗಗನ್ ಹಾಗೂ ಅವರ ಮಗನಿಗೆ ಗಾಯಗಳಾಗಿದ್ದು, ಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಹಂಪಿನಗರದ ಬಿನ್ನಿಮಿಲ್ ಎಂಪ್ಲಾಯಿಸ್ ಕಾಲೊನಿ 14ನೇ ಮುಖ್ಯರಸ್ತೆ ಹಾಗೂ ಟೆಲಿಕಾಂ ಲೇಔಟ್‌ನ ಅಂಬಾ ಭವಾನಿ ದೇವಸ್ಥಾನ ಹತ್ತಿರ ರಸ್ತೆಯಲ್ಲಿರುವ ಮರಗಳ ಕೊಂಬೆಗಳು ಮುರಿದು ಬಿದ್ದು, ವಾಹನಗಳು ಜಖಂಗೊಂಡಿವೆ.
ಬಸವನಗುಡಿ ಸುರಾನ ಕಾಲೇಜು ಬಳಿ ರಸ್ತೆಯಲ್ಲಿ ಪೆಲೋಪಾರಂ ಮರದ ರೆಂಬೆಯು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಸಂಚಾರ ಪೋಲಿಸ್ ಸಿಬ್ಬಂದಿ ಮಾಹಿತಿ ಮೇರೆಗೆ ಬಿಬಿಎಂಪಿ ಅರಣ್ಯ ಘಟಕದ ಮರಗಳ ವ್ಯವಸ್ಥಿತ ನಿರ್ವಹಣಾ ತಂಡದಿಂದ ತೆರವುಗೊಳಿಸಲಾಗಿರುತ್ತದೆ.
‘ಗಾಳಿಯ ರಭಸಕ್ಕೆ ಬಿದ್ದ ನಗರದಲ್ಲಿ ಮರ ಹಾಗೂ ಕೊಂಬೆಗಳು ಬಿದ್ದಿದ್ದು, ಅವುಗಳನ್ನು ಕ್ಷಿಪ್ರವಾಗಿ ತೆರವು ಮಾಡಲಾಗಿದೆ. ನಾಗರಿಕರು ಹಾಗೂ ವಾಹನಗಳ ಸಂಚಾರಕ್ಕೆ ಸುಗಮಗೊಂಡಿದೆ. ಮರದ ಕೊಂಬೆಗಳು ಬಿದ್ದಿರುವುದರಿಂದ ಯಾವುದೇ ರೀತಿಯ ಪ್ರಾಣ ಹಾನಿಯಾಗಿರುವುದಿಲ್ಲ’ ಬಿಬಿಎಂಪಿಯ ಅರಣ್ಯ ವಿಭಾಗದ ಉಪ ಸಂರಕ್ಷಣಾ ಅಧಿಕಾರಿ ಬಿ.ಎಲ್.ಜಿ ಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.