ADVERTISEMENT

ರಾಜರಾಜೇಶ್ವರಿನಗರ: ಪಾದಚಾರಿ ಮಾರ್ಗಕ್ಕಾಗಿ ಮರಗಳ ಹನನ

​ಪ್ರಜಾವಾಣಿ ವಾರ್ತೆ
Published 31 ಮೇ 2024, 4:02 IST
Last Updated 31 ಮೇ 2024, 4:02 IST
ರಾಮಕೃಷ್ಣಪ್ಪ ಲೇಔಟ್ ಬಳಿಯ ಇಂದಿರಾ ಕ್ಯಾಂಟೀನ್‌ನಿಂದ ಸುಮನಹಳ್ಳಿ ಕೆಳಸೇತುವೆ ರಸ್ತೆಯ ಎರಡು ಪಾದಚಾರಿ ಮಾರ್ಗದಲ್ಲಿ ಬಿಬಿಎಂಪಿ ಮಣ್ಣು ತೆಗೆದಿರುವುದರಿಂದ ಮರಗಳು ಬಿದ್ದಿರುವುದು 
ರಾಮಕೃಷ್ಣಪ್ಪ ಲೇಔಟ್ ಬಳಿಯ ಇಂದಿರಾ ಕ್ಯಾಂಟೀನ್‌ನಿಂದ ಸುಮನಹಳ್ಳಿ ಕೆಳಸೇತುವೆ ರಸ್ತೆಯ ಎರಡು ಪಾದಚಾರಿ ಮಾರ್ಗದಲ್ಲಿ ಬಿಬಿಎಂಪಿ ಮಣ್ಣು ತೆಗೆದಿರುವುದರಿಂದ ಮರಗಳು ಬಿದ್ದಿರುವುದು    

ರಾಜರಾಜೇಶ್ವರಿನಗರ: ಕೊಟ್ಟಿಗೆಪಾಳ್ಯ ವಾರ್ಡ್‍ನ ಸುಮನಹಳ್ಳಿ ರಸ್ತೆಯಲ್ಲಿ ರಾಮಕೃಷ್ಣಪ್ಪ ಲೇಔಟ್, ಗಂಗಮ್ಮಗಾರ್ಡನ್, ಮಾಳಗಾಲವರೆಗಿನ ರಸ್ತೆಯ ಎರಡು ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕಾಗಿ, ಆ ಜಾಗದಲ್ಲಿದ್ದ ಹತ್ತಾರು ಮರಗಳನ್ನು ಕಡಿದು ಹಾಕಲಾಗಿದೆ.

ಹೊಸ ವರ್ತುಲ ರಸ್ತೆಯ ಅಂಡರ್‌ಪಾಸ್‌ನಿಂದ ಮಾಳಗಾಲದ ಬಸ್ ತಂಗುದಾಣದವರೆಗೆ ಪಾದಚಾರಿ ಮಾರ್ಗ ನಿರ್ಮಿಸಲು ಮಣ್ಣು ಅಗೆದು ಅಲ್ಲಿದ್ದ ಮರದ ಬೇರುಗಳನ್ನು ಕತ್ತರಿಸಿ ಹಾಕಿದ್ದಾರೆ. ಇದರಿಂದ ಕೆಲವು ಮರಗಳು ಉರುಳಿವೆ. ಈ ಬಗ್ಗೆ ನಾಗರಿಕರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಮಕೃಷ್ಣಪ್ಪ ಲೇಔಟ್‍, ಇಂದಿರಾ ಕ್ಯಾಂಟೀನ್‌ವರೆಗಿರುವ ರಸ್ತೆಯ ಒಂದು ಭಾಗದಲ್ಲಿ ಇಂದಿರಾ ಕ್ಯಾಂಟೀನ್, ಒಣಕಸ ಸಂಗ್ರಹದ ಘಟಕ, ಮತ್ತೊಂದು ಭಾಗದಲ್ಲಿ ಬೋಸ್ಕೊ ವೃತ್ತಿಪರ ತರಬೇತಿ ಕೇಂದ್ರವಿದೆ. ಈ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಅವಶ್ಯಕತೆಯಿರಲಿಲ್ಲ’ ಎಂದು ಇಲ್ಲಿನ ನಿವಾಸಿಗಳು ದೂರಿದರು.

ADVERTISEMENT

‘ಪಾದಚಾರಿ ಮಾರ್ಗ ಮಾಡಬೇಕಾದರೆ, ಮರಗಳನ್ನು ಬಿಟ್ಟು ಪಕ್ಕದಲ್ಲಿ ಮಾಡಬಹುದಿತ್ತು. ಬಿಬಿಎಂಪಿ, ವರ್ಷದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಸಿಗಳನ್ನು ನೆಡುತ್ತದೆ. ಅವಶ್ಯಕತೆ ಇಲ್ಲದಿದ್ದರೂ ಅಭಿವೃದ್ದಿ ಹೆಸರಿನಲ್ಲಿ ಮರಗಳ ಮಾರಣ ಹೋಮ ಮಾಡುವುದು ಎಷ್ಟು ಸರಿ’ ಎಂದು ಸ್ಥಳೀಯ ನಿವಾಸಿ ಲತಾ ಪ್ರಶ್ನಿಸುತ್ತಾರೆ.

‘ಬಿಬಿಎಂಪಿಯ ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ ಅವರ ನಿರ್ಲಕ್ಷ್ಯದಿಂದ ಅಗತ್ಯವಿಲ್ಲದಿದ್ದರೂ ಅಭಿವೃದ್ದಿ ಹೆಸರಲ್ಲಿ ಮರಗಳು ನಾಶವಾಗುತ್ತಿವೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು

ಲಗ್ಗೆರೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವರನಾರಾಯಣ ಮಾತನಾಡಿ ‘ನಾನು ಬರುವ ಮೊದಲೇ ಮಣ್ಣು ಅಗೆದು ಹಾಕಲಾಗಿತ್ತು. ನನ್ನ ಅವಧಿಯಲ್ಲಿ ಕಾಮಗಾರಿ ಪ್ರಾರಂಭವಾಗಿರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಪಾದಚಾರಿ ಮಾರ್ಗದಲ್ಲಿ ಬುಡಸಹಿತ ಉರುಳುವ ಸ್ಥಿತಿಯಲ್ಲಿರುವ ಮರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.