ADVERTISEMENT

ಬೆಂಗಳೂರು | ‘ಬುಡಕಟ್ಟು ಜನರ ಸಮಗ್ರ ಅಭಿವೃದ್ಧಿ’

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 20:33 IST
Last Updated 23 ಜುಲೈ 2025, 20:33 IST
<div class="paragraphs"><p>ಬುಡಕಟ್ಟು ಜನರು– ಪ್ರಾತಿನಿಧಿಕ ಚಿತ್ರ&nbsp;</p></div>

ಬುಡಕಟ್ಟು ಜನರು– ಪ್ರಾತಿನಿಧಿಕ ಚಿತ್ರ 

   

ಬೆಂಗಳೂರು: ‘ಬುಡಕಟ್ಟು ಜನರು ವಾಸಿಸುವ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಸಮುದಾಯದ
ಸಬಲೀಕರಣಕ್ಕೆ ಆದಿ ಕರ್ಮಯೋಗಿ ಅಭಿಯಾನ ಸಹಕಾರಿ’ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಭು ನಾಯರ್ ಅಭಿಪ್ರಾಯಪಟ್ಟರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆ ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ರಾಜ್ಯ ಪ್ರಕ್ರಿಯೆ ಪ್ರಯೋಗಾಲಯ ಉದ್ಘಾಟಿಸಿ, ಅವರು ಮಾತನಾಡಿದರು. 

ADVERTISEMENT

‘ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸಿ, ಅವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು, ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕು. ಬುಡಕಟ್ಟು ಪ್ರದೇಶದಲ್ಲಿ ಕೆಲಸ ನಿರ್ವಹಿಸುವವರು ತ್ವರಿತಗತಿಯಲ್ಲಿ ಜನರ ಬೇಡಿಕೆಗಳಿಗೆ ಸ್ಪಂದಿಸಿ, ಉತ್ತಮ ಆಡಳಿತ ನೀಡಬೇಕು. ಇದರಿಂದ ಸಮಾಜ ಪರಿವರ್ತನೆಯ ಜತೆಗೆ ದೇಶದ ಅಭಿವೃದ್ಧಿ ಸಹ ಸಾಧ್ಯವಾಗುತ್ತದೆ’ ಎಂದರು. 

ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆ ಕಾರ್ಯದರ್ಶಿ ರಂದೀಪ್ ಡಿ., ‘ಸರ್ಕಾರದ ಯೋಜನೆಯನ್ನು ಫಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ತಲುಪಿಸಬೇಕು. ಆದಿ ಕರ್ಮಯೋಗಿ ಅಭಿಯಾನದಡಿ ರಾಜ್ಯದ ಏಳು ಜಿಲ್ಲೆಗಳಲ್ಲಿ, ಬುಡಕಟ್ಟು ಕಲ್ಯಾಣ ಇಲಾಖೆ ಸೇರಿ ಇತರ ಪ್ರಮುಖ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಆಡಳಿತ, ವ್ಯಕ್ತಿತ್ವ ವಿಕಸನ ಸೇರಿ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ’ ಎಂದು ಹೇಳಿದರು.

ಇಲಾಖೆಯ ನಿರ್ದೇಶಕ ಟಿ. ಯೋಗೇಶ್, ‘ರಾಜ್ಯದಲ್ಲಿ ಸುಮಾರು 50 ಬುಡಕಟ್ಟು ಪಂಗಡಗಳನ್ನು ಗುರುತಿಸಲಾಗಿದೆ. ಅವರಿಗೆ ವಿದ್ಯಾರ್ಥಿವೇತನದ ಜತೆಗೆ ಶಿಕ್ಷಣ, ವಸತಿಶಾಲೆ, ವಸತಿ ಹಾಗೂ ಇನ್ನಿತರ ಸೌಲಭ್ಯಕ್ಕೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಧವಾ ವಿವಾಹ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಬುಡಕಟ್ಟು ಕಲ್ಯಾಣ ಇಲಾಖೆ ಜತೆಗೆ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಕೈಜೋಡಿಸಿದರೆ, ಸಮುದಾಯದ ಅಭಿವೃದ್ಧಿ ತ್ವರಿತಗತಿಯಲ್ಲಿ ಆಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.