ADVERTISEMENT

ಕುದುರೆಗಳ ಮೇಲೆ ಕ್ರೌರ್ಯ ಆರೋಪ: ಟರ್ಫ್‌ ಕ್ಲಬ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 20:10 IST
Last Updated 6 ಮಾರ್ಚ್ 2019, 20:10 IST
   

ಬೆಂಗಳೂರು: ‘ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಕುದುರೆಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯ ವ್ಯಾಪಕ ಉಲ್ಲಂಘನೆ ಆಗುತ್ತಿದೆ’ ಎಂದು ಆಕ್ಷೇಪಿಸಿ ‘ಕಂಪ್ಯಾಷನ್ ಅನ್‌ಲಿಮಿಟೆಡ್ ಪ್ಲಸ್ ಆಕ್ಷನ್’ (ಕ್ಯುಪಾ) ಸ್ವಯಂ
ಸೇವಾ ಸಂಸ್ಥೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಈ ಅರ್ಜಿ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಬೆಂಗಳೂರು ಟರ್ಫ್‌ ಕ್ಲಬ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಲಾಗಿದೆ.

ADVERTISEMENT

‘ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆಯ ವ್ಯಾಪಕ ಉಲ್ಲಂಘನೆ ಆಗುತ್ತಿರುವ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಹಾಗೂ ಕ್ಲಬ್‌ನ ಕುದುರೆಗಳ ನೋಂದಣಿ ರದ್ದುಪಡಿಸುವಂತೆ ಭಾರತೀಯ ಪ್ರಾಣಿ
ಕಲ್ಯಾಣ ಮಂಡಳಿಗೆ ನಿರ್ದೇಶನ ನೀಡಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಾಣಿಗಳ ಪ್ರದರ್ಶನ (ನೋಂದಣಿ) ಅಧಿನಿಯಮ 2001ರ ನಿಯಮ 8ರ ಷರತ್ತುಗಳಿಗೆ ಬದ್ಧವಾಗಿರುವಂತೆ ಬೆಂಗಳೂರು ಟರ್ಫ್‌ ಕ್ಲಬ್‌ಗೆ ನಿರ್ದೇಶನ ನೀಡುವಂತೆಯೂ ಮನವಿ ಮಾಡಲಾಗಿದೆ.

40 ಕುದುರೆ ಸಾವು: ‘ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಕಳೆದ 6 ತಿಂಗಳಲ್ಲಿ 40 ಕುದುರೆ ಸಾವನ್ನಪ್ಪಿವೆ. ಇಲ್ಲಿ ಒಟ್ಟು 800 ಅಶ್ವಶಾಲೆಗಳಿದ್ದು, ಅತ್ಯಂತ ಕಳಪೆ ಮಟ್ಟದಿಂದ ಕೂಡಿವೆ. ಜಾಕಿಗಳು ಕುದರೆಗಳ ಮೇಲೆ ಹೆಚ್ಚಿನ ಬಲ ಪ್ರಯೋಗಿಸುತ್ತಾರೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.