ADVERTISEMENT

ಬೆಂಗಳೂರು ನೀರಿನಲ್ಲಿ ಮುಳುಗಿದ್ದು ಏಕೆ?ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಅಭಿಪ್ರಾಯ

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 3:27 IST
Last Updated 26 ಸೆಪ್ಟೆಂಬರ್ 2022, 3:27 IST
ಡಾ.ಟಿ. ವಿ. ರಾಮಚಂದ್ರ
ಡಾ.ಟಿ. ವಿ. ರಾಮಚಂದ್ರ   

ಬೆಂಗಳೂರು: ‘ರಾಜಧಾನಿಯಲ್ಲಿ ನಡೆದಿರುವ ಒತ್ತುವರಿ ತೆರವುಗೊಳಿಸಿ ಜಲಮೂಲವನ್ನು ಸಂರಕ್ಷಿಸಬೇಕು’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯಪರಿಸರ ವಿಜ್ಞಾನಿಡಾ.ಟಿ.ವಿ.ರಾಮಚಂದ್ರ ಸಲಹೆ ನೀಡಿದರು.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಉಂಟಾಗಿದ್ದ ಪ್ರವಾಹದ ಹಿನ್ನೆಲೆಯಲ್ಲಿ ‘ಬ್ರೇಕ್‌ಥ್ರೋ ಸೈನ್ಸ್‌ ಸೊಸೈಟಿ’ ಆಯೋಜಿಸಿದ್ದ ‘ಕರ್ನಾಟಕದ ನಗರಗಳು ನೀರಿನಲ್ಲಿ ಮುಳುಗಿದ್ದು ಏಕೆ?’ ವಿಷಯ ಕುರಿತ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಅರಣ್ಯದ ಅತಿಕ್ರಮಣ ತಡೆಯಲು ಮೊದಲ ಆದ್ಯತೆ ನೀಡಬೇಕಾಗಿದೆ. ನಗರೀಕರಣಕ್ಕೆ ಬೆಂಗಳೂರಿನಲ್ಲಿ ಶೇ 88ರಷ್ಟು ಸಸ್ಯ ಸಂಪತ್ತು ನಾಶವಾಗಿದೆ. ಶೇ 75ರಷ್ಟು ಜಲಮೂಲಗಳು ಕಣ್ಮರೆಯಾಗಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಲಿವೆ. ಪ್ರಸ್ತುತ ಬೆಂಗಳೂರಿನಲ್ಲಿ 7 ಮಂದಿಗೆ 1 ಮರವಿದೆ. ಸರಿಯಾದ ಅನುಪಾತವೆಂದರೆ ಪ್ರತಿ ವ್ಯಕ್ತಿಗೆ 7ರಿಂದ 8 ಮರಗಳು ಇರಬೇಕು’ ಎಂದರು.

ವಿಜ್ಞಾನಿ ಡಾ.ಶ್ರೀಕಾಂತ್‌ ಶ್ರೀರಾಮ್‌, ‘ಪ್ರವಾಹದಿಂದ ಸಾಕಷ್ಟು ದಿನಗಳ ಕಾಲ ನೀರು ಒಂದೇ ಸ್ಥಳದಲ್ಲಿ ನಿಂತರೆ ಸಮುದಾಯಕ್ಕೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚು. ಡೆಂಗಿ, ಮಲೇರಿಯಾ ಸೇರಿದಂತೆ ಚರ್ಮ ಸಂಬಂಧಿ ಕಾಯಿಲೆಗಳು ಬರುತ್ತವೆ. ಬೆಂಗಳೂರಿನಲ್ಲಿ ಉಂಟಾಗಿದ್ದ ಪ್ರವಾಹದಿಂದ ಡೆಂಗಿ ಪ್ರಕರಣಗಳು ಹೆಚ್ಚಿವೆ. ಪ್ರವಾಹದ ಸಂದರ್ಭದಲ್ಲಿ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೆ ಮೊದಲು ಆದ್ಯತೆ ನೀಡಬೇಕಿದೆ’ ಎಂದು ಸೂಚಿಸಿದರು.

‘ಪ್ರವಾಹದ ನಂತರ ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣಿಸಿದರೆ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಮಾಸ್ಕ್ ಧರಿಸುವುದು ಕಡ್ಡಾಯ. ಸಲಹಾ ಕೇಂದ್ರ ತೆರೆಯಬೇಕು’ ಎಂದು ಹೇಳಿದರು.

ಹವಾಮಾನ ತಜ್ಞೆ ಎ.ಸಂಜನಾ ಮಾತನಾಡಿ, ‘ರಾಜ್ಯದಲ್ಲಿ ಹವಾಮಾನ ಬದಲಾವಣೆಯಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.