
ಬೆಂಗಳೂರು: ಕ್ಯಾಮರೂನ್ ದೇಶದ ಪ್ರಜೆಯನ್ನು ಬೆದರಿಸಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಿಜ್ವಾನ್ ಪಾಶಾ (25) ಹಾಗೂ ಕೃತಿಕ್ ಪ್ರೀತಂ (25) ಬಂಧಿತರು. ಬಂಧಿತರಿಂದ ಪಾಸ್‌ಪೋರ್ಟ್, ₹86 ಸಾವಿರ ನಗದು, ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏ.16ರಂದು ಬೆಳಿಗ್ಗೆ ಕೊಡಿಗೇಹಳ್ಳಿಯ ಹೊರ ವರ್ತುಲ ರಸ್ತೆಯಲ್ಲಿ ಕ್ಯಾಮರೂನ್ ದೇಶದ ಪ್ಯಾಟ್ರೀಸ್ ಕ್ಯಾಂಡೇಮ್ ಅವರು ನಿಂತಿದ್ದರು. ಆಗ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಮಾರಕಾಸ್ತ್ರಗಳನ್ನು ತೋರಿಸಿ ದ್ವಿಚಕ್ರ ವಾಹನ, ಪಾಸ್‌ಪೋರ್ಟ್, ನಗದು ಹಾಗೂ ಇತರೆ ದಾಖಲೆಗಳಿದ್ದ ಬ್ಯಾಗ್ ಅನ್ನು ಕಿತ್ತುಕೊಂಡು ಪರಾರಿ ಆಗಿದ್ದರು. ಪ್ಯಾಟ್ರೀಸ್ ಕ್ಯಾಂಡೇಮ್ ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಆರೋಪಿ ಬಂಧನ: ಕನ್ನ ಕಳವು ಆರೋಪಿ, ಆಂಧ್ರಪ್ರದೇಶದ ಗೋದಾವರಿಯ ನಿವಾಸಿ ಶ್ರೀನಿವಾಸ್ (41) ಎಂಬಾತನನ್ನು ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ₹9.20 ಲಕ್ಷ ಮೌಲ್ಯದ 148 ಗ್ರಾಂ ಚಿನ್ನ ಹಾಗೂ 200 ಗ್ರಾಂ ಬೆಳ್ಳಿ ಸಾಮಗ್ರಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಬಾಲಾಜಿ ಲೇಔಟ್‌ನ ನಿವಾಸಿಯೊಬ್ಬರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಮನೆಯ ಮಾಲೀಕರು ಇಸ್ಕಾನ್ ದೇವಸ್ಥಾನದಲ್ಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗಿ ಮನೆಯ ಮುಂದಿನ ಬಾಗಿಲು ಒಡೆದು ಕಳ್ಳತನ ಮಾಡಿರುವುದು ಗೊತ್ತಾಗಿತ್ತು. ಕೊಠಡಿಯ ಬೀರುವಿನಲ್ಲಿ ಇಡಲಾಗಿದ್ದ ಚಿನ್ನವನ್ನು ಕಳ್ಳತನ ಮಾಡಲಾಗಿತ್ತು.
ನಾಗವಾರದ ಪೇಯಿಂಗ್ ಗೆಸ್ಟ್(ಪಿ.ಜಿ) ಎದುರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕದ್ದ ಚಿನ್ನಾಭರಣವನ್ನು ಮೈಸೂರಿನಲ್ಲಿರುವ ಸ್ನೇಹಿತನಿಗೆ ಆರೋಪಿ ನೀಡಿದ್ದ. ಬೆಳ್ಳಿಯ ಸಾಮಗ್ರಿಯನ್ನು ಆರೋಪಿ ವಾಸವಿದ್ದ ಪಿ.ಜಿಯಲ್ಲಿ ಇಟ್ಟಿದ್ದ. ಅಲ್ಲಿಂದ ಚಿನ್ನ ಹಾಗೂ ಬೆಳ್ಳಿ ಸಾಮಗ್ರಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.