ADVERTISEMENT

ರಾತ್ರಿ ಹೊರಗೆ ಓಡಾಡೋದು ತಪ್ಪೆಂದು ದಂಪತಿಯಿಂದ ಹಣ ವಸೂಲಿ: ಇಬ್ಬರು ಪೊಲೀಸರ ಅಮಾನತು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 11:36 IST
Last Updated 11 ಡಿಸೆಂಬರ್ 2022, 11:36 IST
   

ಬೆಂಗಳೂರು: ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿ ದಂಪತಿಯಿಂದ ₹ 1 ಸಾವಿರ ಸುಲಿಗೆ ಮಾಡಿದ್ದಾರೆಂಬ ಆರೋಪದ ಮೇರೆಗೆ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ.

ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ರಾಜೇಶ್ ಹಾಗೂ ಕಾನ್‌ಸ್ಟೆಬಲ್ ನಾಗೇಶ್ ಅಮಾನತು ಸಿಬ್ಬಂದಿ. ‘ಇಬ್ಬರನ್ನೂ ಅಮಾನತು ಮಾಡಲಾಗಿದೆ. ಪ್ರಕರಣ ಕುರಿತು ತನಿಖೆ ನಡೆಸುವಂತೆ ಸೂಚಿಸಲಾಗಿದೆ’ ಎಂದು ಡಿಸಿಪಿ ಅನೂಪ್‌ ಶೆಟ್ಟಿ ತಿಳಿಸಿದ್ದಾರೆ.

‘ಡಿ.8ರ ರಾತ್ರಿ 12.30ರ ವೇಳೆಯಲ್ಲಿ ನಾನು ಹಾಗೂ ಪತ್ನಿ ಸ್ನೇಹಿತರ ಮನೆಯಲ್ಲಿದ್ದ ಕಾರ್ಯಕ್ರಮ ಮುಗಿಸಿ ಮಾನ್ಯತಾ ಟೆಕ್‌ ಬಳಿ ಬರುತ್ತಿರುವಾಗ ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರು ಅಡ್ಡಗಟ್ಟಿ ರಾತ್ರಿ ವೇಳೆ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದೀರಿ. ₹ 3 ಸಾವಿರ ದಂಡ ನೀಡುವಂತೆ ಬೇಡಿಕೆಯಿಟ್ಟಿದ್ದರು. ಕೊನೆಗೆ ಡಿಜಿಟಲ್‌ ಪೇಪೆಂಟ್‌ ಮೂಲಕ ₹ 1 ಸಾವಿರ ಪಡೆದಿದ್ದರು’ ಎಂದು ಆರೋಪಿಸಿ ಕಾರ್ತಿಕ್‌ ಪಾತ್ರಿ ಎಂಬುವವರು ಘಟನೆ ಕುರಿತು ಸರಣಿ ಟ್ವೀಟ್‌ ಮಾಡಿ ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಿದ್ದರು. ಅದನ್ನು ಗಮನಿಸಿದ್ದ ಡಿಸಿಪಿ ಅವರು ಅಂದು ಆ ಸ್ಥಳದಲ್ಲಿ ಕರ್ತವ್ಯದಲ್ಲಿ ಸಿಬ್ಬಂದಿ ಪತ್ತೆಗೆ ಸೂಚಿಸಿದ್ದರು.

ADVERTISEMENT

‘ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ನೆಲೆಸಿದ್ದೇವೆ. ನಮ್ಮ ಬಳಿ ಬಾಕ್ಸ್‌ನಲ್ಲಿ ಕೇಕ್‌ ಬಿಟ್ಟರೆ ಬೇರೇನೂ ಇರಲಿಲ್ಲ. ಮೊಬೈಲ್‌ನಲ್ಲಿ ಆಧಾರ್‌ ಕಾರ್ಡ್‌ ಫೋಟೊ ಪ್ರತಿಗಳಿದ್ದವು. ಅದನ್ನು ತೋರಿಸಿದರೂ ಪೊಲೀಸರು ಸಂಬಂಧ, ಕೆಲಸದ ಸ್ಥಳ, ಪೋಷಕರ ವಿವರ... ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದರು. ತಾಳ್ಮೆಯಿಂದಲೇ ಉತ್ತರಿಸಿದೆವು. ಒಬ್ಬರು ಚಲನ್‌ ತೆಗೆದುಕೊಂಡು ಆಧಾರ್‌ ಸಂಖ್ಯೆ ಹಾಗೂ ಹೆಸರು ಬರೆಯುಲು ಮುಂದಾದರು. ಅದನ್ನು ಪ್ರಶ್ನಿಸಿದೆ’ ಎಂದು ಟ್ವೀಟ್‌ ಮಾಡಿದ್ದರು.

‘ರಾತ್ರಿ 11ರ ನಂತರ ತಿರುಗಾಡಲು ಅವಕಾಶ ಇಲ್ಲ ಒಬ್ಬ ಸಿಬ್ಬಂದಿ ಹೇಳಿದರು. ಅಂತಹ ನಿಯಮವಿದೆಯೇ? ಅದರ ಅರಿವು ನಮಗೆ ಇಲ್ಲ ಎಂದಿದ್ದಕ್ಕೆ ಬೆದರಿಕೆ ಹಾಕಿದರು. ಮೊಬೈಲ್‌ ಕಸಿದುಕೊಂಡು ₹ 3 ಸಾವಿರ ದಂಡ ಕಟ್ಟುವಂತೆ ಹೇಳಿದರು. ದಂಡ ಕಟ್ಟದಿದ್ದರೆ ಬಂಧಿಸಲಾಗುವುದೆಂದು ಬೆದರಿಸಿದರು’ ಎಂದು ಹೇಳಿದ್ದಾರೆ.

‘ಪತ್ನಿ ಕಣ್ಣೀರು ಹಾಕಿದರೂ ಪೊಲೀಸರು ಸುಮ್ಮನಾಗಲಿಲ್ಲ. ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ. ಕಡಿಮೆ ಹಣ ನೀಡುವಂತೆ ತಿಳಿಸಿದರು. ಅದಕ್ಕೆ ಒಪ್ಪಿ ಡಿಜಿಟಲ್‌ ಪಾವತಿ ಮೂಲಕ ₹ 1 ಸಾವಿರ ನೀಡಲಾಯಿತು. ಕಾನೂನು ರಕ್ಷಕರು ನಾಗರಿಕರನ್ನು ನಡೆಸಿಕೊಳ್ಳುವುದು ಹೀಗೆಯೇ’ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದರು.

ಕಾಂಗ್ರೆಸ್‌ ಮುಖಂಡರ ಆಕ್ರೋಶ: ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಆರಂಭಿಸಿದ ಬಳಿಕ ಮರ್ಯಾದಸ್ಥ ದಂಪತಿ ರಾತ್ರಿ ರಸ್ತೆಯಲ್ಲಿ ನಡೆದರೆ ಪೊಲೀಸರು ತನಿಖೆ ನಡೆಸುತ್ತಾರೆ. ರೌಡಿ ಶೀಟರ್‌ಗಳು ರಾತ್ರಿ ರಸ್ತೆಗಳನ್ನು ಆಕ್ರಮಿಸಿಕೊಳ್ಳುತ್ತಾರೆ. ‘ಘನತೆ-ಮರ್ಯಾದೆ ಮುಕ್ತ ಕರ್ನಾಟಕ’ ಮಾಡಲು ಹೊರಟಿದ್ದೀರಾ ಎಂದು ಕಾಂಗ್ರೆಸ್‌ ಮುಖಂಡ ಪ್ರಕಾಶ ರಾಥೋಡ್‌ ಅವರು ಪ್ರಶ್ನಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.